ಬೀದರ್: ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ನಗರಸಭೆಯು ಇಲ್ಲಿಯ ಶರಣ ಉದ್ಯಾನದ ಸಮೀಪ ಸಬ್ಬಲ್ ಬರೀದ್ ಶಾಹಿ ಮಾರ್ಗದಲ್ಲಿ ಹೆಣ್ಣು ಮಗು ವೃತ್ತ (ಬೇಟಿ ಸರ್ಕಲ್) ನಿರ್ಮಿಸಿದೆ.
ಹೆಣ್ಣು ಮಗುವಿನ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದುವ ಸದಾಶಯದೊಂದಿಗೆ ತಾಯಿ ಹೆಣ್ಣುಮಗುವನ್ನು ಎತ್ತಿಕೊಂಡಿರುವ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ನಗರಸಭೆಯು ₹ 10 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ.
2018ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎಚ್.ಆರ್.ಮಹಾದೇವ ಅವರು ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ‘ಹೆಣ್ಣು ಮಗು ವೃತ್ತ’ ನಿರ್ಮಿಸಲು ತೀರ್ಮಾನಿಸಿದ್ದರು. ನಂತರ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ವೃತ್ತ ನಿರ್ಮಾಣ ಮಾಡಿಸಿದ್ದರು. ವೃತ್ತದ ಸುತ್ತಲೂ ‘ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ’ ಎಂದು ಕನ್ನಡ, ಹಿಂದಿ ಭಾಷೆಯಲ್ಲಿ ಬರೆಸಲಾಗಿದೆ.
‘ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕಿದೆ. ಹೆಣ್ಣು ಮಗು ನಮಗೆ ಹೊರೆ ಎನ್ನುವ ಕಳಂಕ ತೊರೆಯಬೇಕಿದೆ. ಸಮಾಜದಲ್ಲಿ ಹೆಣ್ಣಿಗೂ ಗೌರವ ಇದೆ ಎನ್ನುವುದನ್ನು ಮನವರಿಕೆ ಮಾಡುವ ದಿಸೆಯಲ್ಲಿ ಈ ವೃತ್ತ ನಿರ್ಮಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಇದನ್ನು ಸಚಿವ ಪ್ರಭು ಚವಾಣ್ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.