ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತು ‘ದಾಖಲಾತಿ ಮಾರ್ಗಸೂಚಿ 2021–22’ ಬಿಡುಗಡೆಯಾದ ನಂತರ ಪ್ರಸಕ್ತ ಶೈಕ್ಷಣಿಕ ಸಾಲಿನ (2021–22) ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶರು ಸೂಚಿಸಿದ್ದಾರೆ.
ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕಾಲೇಜುಗಳು ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಾರದು. ಅಲ್ಲದೆ, ಆನ್‌ಲೈನ್ ತರಗತಿಗಳನ್ನೂ ಆರಂಭಿಸಬಾರದು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೂಚನೆಯನ್ನು ಉಲ್ಲಂಘಿಸಿ, ವಿದ್ಯಾರ್ಥಿಗಳ ದಾಖಲಾತಿ ಅಥವಾ ಆನ್‌ಲೈನ್ ತರಗತಿ ನಡೆಸಿದ ಬಗ್ಗೆ ಗಮನಕ್ಕೆ ಬಂದರೆ ಅಂಥ ಕಾಲೇಜುಗಳ ಮೇಲೆ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಕಾಲೇಜುಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ವ್ಯಾಪ್ರಿಯ ಕಾಲೇಜುಗಳ ಪ್ರಾಂಶುಪಾಲರಿಗೆ ಮಾಹಿತಿ ನೀಡಬೇಕು. ಅಲ್ಲದೆ, ನಿಗಾ ವಹಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಅವರು ಸುತ್ತೋಲೆ ಹೊರಡಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.