ADVERTISEMENT

ಮಾ.19ರ ಮಂಗಳವಾರ ಪ್ರಥಮ ಪಿಯುಸಿ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 11:45 IST
Last Updated 17 ಮಾರ್ಚ್ 2019, 11:45 IST
   

ಬೆಂಗಳೂರು: 2018–19 ರ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಮಾ.19ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ.

ಫಲಿತಾಂಶವನ್ನು ಜಿಲ್ಲಾ ಉಪನಿರ್ದೇಶಕರ ಅನುಮೋದನೆಯೊಂದಿಗೆ ಸಂಬಂಧಿಸಿದ ಎಲ್ಲಾ ಕಾಲೇಜುಗಳಿಗೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗಜೀವನ್‌ದಾಸ್‌ ಭಂಡಾರಿ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ಪದವಿಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್‌ನಲ್ಲೂ ಪಡೆದುಕೊಳ್ಳಬಹುದು. ಅಲ್ಲದೆ, ಉತ್ತೀರ್ಣರಾದ ವಿದ್ಯಾರ್ಥಿಗಳು ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.

ADVERTISEMENT

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಏಪ್ರಿಲ್‌ 28 ರಿಂದ ಮೇ 10 ರವರೆಗೆ ಪೂರಕ ಪರೀಕ್ಷೆಯನ್ನು ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಂಸಿಎ(ಮಾರ್ಕ್ಸ್‌ ಕಂ ಅಪ್ಲಿಕೇಷನ್‌) ಡೌನ್‌ಲೋಡ್‌ ಮಾಡಿಕೊಂಡು ಮಾ.30 ರೊಳಗೆ ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಕಾಲೇಜಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಪೂರಕ ಪರೀಕ್ಷೆ ಫಲಿತಾಂಶ ಮೇ 15 ರಂದು ಪ್ರಕಟಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಗೆ ದಾಖಲಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಫಲಿತಾಂಶ: ಶೇ 90.11 ಉತ್ತೀರ್ಣ

ಈ ಬಾರಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 56250 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 50,694 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ 3868 ವಿದ್ಯಾರ್ಥಿಗಳಲ್ಲಿ 3226 ವಿದ್ಯಾರ್ಥಿಗಳು (ಶೇ 83.40), ವಾಣಿಜ್ಯ 32,603 ವಿದ್ಯಾರ್ಥಿಗಳಲ್ಲಿ 28,841(ಶೇ 88.46) ಮತ್ತು ವಿಜ್ಞಾನ ವಿಭಾಗದಲ್ಲಿ 19,779 ವಿದ್ಯಾರ್ಥಿಗಳಲ್ಲಿ 18627(ಶೇ 94.18) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಭಂಡಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.