ಮೈಸೂರು: ದೂರಸಂಪರ್ಕ ಸೇವಾ ಸಂಸ್ಥೆ ಭಾರತ್ ಸಂಚಾರ್ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್) ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ.
ಈ ಮೂಲಕ ಇಡೀ ರಮ್ಮನಹಳ್ಳಿ ಗ್ರಾಮವು ವೈ-ಫೈ ವಲಯವಾಗಿದ್ದು, ಗ್ರಾಮದ ಸಾರ್ವಜನಿಕರು ವಿವಿಧ ಯೋಜನೆಯಡಿ ವೋಚರ್ ರೀಚಾರ್ಜ್ ಮಾಡಿಸಿಕೊಂಡು 50 ಎಂಬಿಪಿಎಸ್ ವೇಗದವರೆಗೆ ಇಂಟರ್‌ನೆಟ್ ಸಂಪರ್ಕ ಪಡೆಯಬಹುದು.
ಬಿಎಸ್‌ಎನ್‌ಎಲ್ ಮೈಸೂರು ದೂರಸಂಪರ್ಕ ವೃತ್ತವು ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ ಗ್ರಾಮದಲ್ಲಿ ಎಂಟು ಕಡೆ ‘ಸಾರ್ವಜನಿಕ ದತ್ತಾಂಶ ಕೇಂದ್ರ’ ಸ್ಥಾಪಿಸಿದ್ದು, 32 ಕಡೆ ವೈ–ಫೈ ಹಾಟ್‌ಸ್ಪಾಟ್ ಲಭ್ಯವಿರಲಿವೆ.
‘ಬಿಎಸ್‌ಎನ್‌ಎಲ್ ವೈಫೈ 69’ ಯೋಜನೆಯಡಿ ₹ 69 ಪಾವತಿಸಿ 30 ಜಿಬಿ ಡಾಟಾವನ್ನು 30 ದಿನಗಳ ಅವಧಿಗೆ ಪಡೆಯಬಹುದು. ‘ಬಿಎಸ್‌ಎನ್‌ಎಲ್ ವೈಫೈ 9’ ಅಡಿ ₹ 9 ಪಾವತಿಸಿ 1 ಜಿಬಿ ಡಾಟಾವನ್ನು ದಿನದ ಮಟ್ಟಿಗೆ ಪಡೆಯಬಹುದು. ಒಟ್ಟು ಐದು ಯೋಜನೆಗಳಿವೆ. ವೋಚರ್ ಖರೀದಿಸಿ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೈಫೈ ಆನ್ ಮಾಡಿಕೊಂಡು ಸಂಪರ್ಕ ಪಡೆಯಬಹುದು’ ಎಂದು ಬಿಎಸ್‌ಎನ್‌ಎಲ್ ಹಿರಿಯ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ನಿರಂತರ ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕಕ್ಕೆ ಮಂಗಳವಾರ ಚಾಲನೆ ಲಭಿಸಲಿದ್ದು, ಬಿಎಸ್‌ಎನ್‌ಎಲ್ ಮಂಡಳಿಯ ನಿರ್ದೇಶಕ (ಕನ್ಸ್ಯೂಮರ್ ಫಿಕ್ಸೆಡ್ ಆಕ್ಸೆಸ್) ವಿವೇಕ್ ಬನ್ಜಾಲ್ ಉದ್ಘಾಟಿಸಲಿದ್ದಾರೆ. ಬಿಎಸ್‌ಎನ್‌ಎಲ್ ಕರ್ನಾಟಕ ದೂರಸಂಪರ್ಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೇವೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.