ಕಾರವಾರ: ಮೀನು ದರ ಕುಸಿತದಿಂದಾಗಿ ಕಂಗೆಟ್ಟ ಮೀನುಗಾರರು, ಬೇಟೆಯಾಡಿದ ಮೀನುಗಳನ್ನು ಸೋಮವಾರ ಕಡಲ ತೀರದಲ್ಲೇ ಹೂತುಹಾಕಿದರು.
ಗೋವಾ ಸರ್ಕಾರವು ಹೊರ ರಾಜ್ಯಗಳ ಮೀನು ಆವಕಕ್ಕೆ ನಿರ್ಬಂಧ ಹೇರಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗೆ ಭರಪೂರ ಮೀನು ಪೂರೈಕೆಯಾಗುತ್ತಿದ್ದು, ದರ ಕುಸಿದಿದೆ.
ಗೋವಾದ ಕಠಿಣ ಷರತ್ತುಗಳ ಕಾರಣದಿಂದ ಅಲ್ಲಿಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗದಿಂದ ಮೀನು ಸಾಗಣೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಮೀನುಗಾರಿಕೆಗೆ ಬಂಡವಾಳ ಹೂಡಿದವರಿಗೆ, ಸಾಂಪ್ರದಾಯಿಕ ಮೀನುಗಾರರಿಗೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಹೀಗಾಗಿಲಾಭಾಂಶ ಇಲ್ಲದೇ ಹೋದರೂ ಕನಿಷ್ಠ ದಿನಗೂಲಿ, ಯಾಂತ್ರೀಕೃತ ದೋಣಿಗಳ ಡೀಸೆಲ್ ಖರ್ಚಾದರೂ ಸಿಗಲಿ ಎಂಬ ಲೆಕ್ಕಾಚಾರದಲ್ಲಿಸ್ಥಳೀಯ ಮಾರುಕಟ್ಟೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ.
‘ದೊಡ್ಡ ಗಾತ್ರದ ಮೀನುಗಳುಮಾತ್ರ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ. ಎರಡು ದಿನಗಳ ಹಿಂದೆ ಕಾರವಾರ ಮಾರುಕಟ್ಟೆಯಲ್ಲಿ ತಾರ್ಲೆ ಮೀನಿನ ಒಂದು ಗುಂಪಿಗೆ (ಅಂದಾಜು ಒಂದು ಕೆ.ಜಿ) ₹ 100ರ ಆಸುಪಾಸು ದರವಿತ್ತು. ಆದರೆ, ಸೋಮವಾರ ₹ 50ಕ್ಕೆ ಇಳಿಯಿತು. ₹ 100ಕ್ಕೆಆರುಅಥವಾ ಏಳು ಬಾಂಗ್ಡಾ ಮೀನು ಸಿಗುತ್ತಿತ್ತು. ಆದರೆ, ಈಗ ವ್ಯಾಪಾರಿಗಳು 9–10ರವರೆಗೂ ಮಾರಾಟ ಮಾಡುತ್ತಿದ್ದಾರೆ. ಮೊದಲು ₹ 500ಕ್ಕೆ ನಾಲ್ಕರಂತೆ ಮಾರಾಟವಾಗುತ್ತಿದ್ದ ಪಾಂಫ್ರೆಟ್ (ಮಾಂಜಿ) ಮೀನು, ₹ 200ಕ್ಕೆ ಬಿಕರಿಯಾದವು. ಇದರಿಂದ ನಮಗೆ ನಷ್ಟವಾಗುತ್ತಿದೆ’ಎಂದು ಮೀನುಗಾರ ನಾಗೇಂದ್ರ ಹೇಳಿದರು.
ಹೀಗಾಗಿ, ಸಣ್ಣ ಹಾಗೂ ಮಧ್ಯಮ ಗಾತ್ರದ ಮೀನುಗಳನ್ನು ಮಾರುಕಟ್ಟೆಗೆ ಸಾಗಿಸದೇ ಕಡಲ ತಡಿಯಲ್ಲೇ ಮರಳಿನಲ್ಲಿ ಹೂತುಹಾಕುತ್ತಿದ್ದಾರೆ.
ದಿನವೊಂದಕ್ಕೆ ಲಕ್ಷಾಂತರ ಪ್ರವಾಸಿಗರು ಬಂದು ಹೋಗುವ ಗೋವಾ, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಮೀನುಗಾರರಿಗೆ ದೊಡ್ಡ ಪ್ರಮಾಣದ ಆದಾಯ ನೀಡುತ್ತಿದೆ.ಅಲ್ಲಿನ ಮಾರುಕಟ್ಟೆಗಳಲ್ಲಿ ಮೀನು ಸಂಸ್ಕರಣೆಗೆವಿಷಕಾರಿ ಫಾರ್ಮಾಲಿನ್ ಬಳಕೆ ಮಾಡಿದ್ದು ಪತ್ತೆಯಾಗಿತ್ತು. ಅದಾದ ಬಳಿಕ ಗೋವಾ ಸರ್ಕಾರ ಮೀನು ಮಾರಾಟಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳುವುದು, ಮುಚ್ಚಿದ ಲಾರಿಯಲ್ಲೇ ಮೀನು ಸಾಗಣೆ ಸೇರಿದಂತೆ ಕೆಲವು ಷರತ್ತು ವಿಧಿಸಿತ್ತು.
ಇಂದು ಚರ್ಚೆ ಸಾಧ್ಯತೆ
‘ಗೋವಾ ಸರ್ಕಾರ ಹೇರಿದ ನಿರ್ಬಂಧದಿಂದ ಅಲ್ಲಿನ ಮೀನು ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಮುಂದೇನು ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಲು ಅಲ್ಲಿನ ವ್ಯಾಪಾರಸ್ಥರ ಮುಖಂಡರು ಮಂಗಳವಾರ ಕಾರವಾರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸ್ಥಳೀಯವರ್ತಕರ ಜತೆಗೂಡಿ ಗೋವಾ ಸರ್ಕಾರಕ್ಕೆ ಮನವಿ ನೀಡಲು ಚಿಂತನೆ ನಡೆಸಲಾಗಿದೆ’ ಎಂದು ಕಾರವಾರ ಮೀನು ವ್ಯಾಪಾರಸ್ಥರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರವೀಣ್ ಜಾವ್ಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.