ಬೆಂಗಳೂರು: ಪಂಟಿಯಸ್ ಕರ್ನಾಟಿಕಸ್, ಕೋಯಿ ಕಾರ್ಪ್, ಫಿದರ್ ಬ್ಯಾಕ್ಸ್, ಮಹಶೀರ್, ಗಿಫ್ಟ್ ತಿಲಾಪಿಯಾ, ಡೆನಿಸೋನಿ ಬಾರ್ಬ್, ಡಾಕ್ಟರ್ ಗಾರ‍್ರಾ , ಗೈನ್‌ತೇರಿ, ಸಿಂಘಿ, ಸ್ನೇಕ್ ಹೆಡ್...
ಇವು ವಿಭಿನ್ನ ಮೀನು ತಳಿಗಳ ಹೆಸರು. ಮೀನುಗಾರಿಕೆ ಇಲಾಖೆ ಹಾಗೂ ಫ್ರೀಡಂ ಆ್ಯಪ್ ಸಹಯೋಗದಲ್ಲಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಒಳನಾಡು ಮೀನು ಉತ್ಪಾದಕರ ಸಮಾವೇಶ–2022’ದಲ್ಲಿ ಮೀನು ತಳಿಗಳ ಪರಿಚಯ ಮಾಡಿಸಲಾಯಿತು.
ವಿವಿಧ ಜಿಲ್ಲೆಗಳಿಂದ ಬಂದಿದ್ದ ಮೀನು ಕೃಷಿಕರು ಭಾಗವಹಿಸಿದ್ದರು. ಇಲಾಖೆಯ ಯೋಜನೆಗಳ ಜೊತೆಗೆ, ಒಳನಾಡಿನಲ್ಲಿ ಸಾಕಬಹುದಾದ ಮೀನು ಗಳ ತಳಿಗಳ ಬಗ್ಗೆ ತಜ್ಞರು ಮಾಹಿತಿ ಒದಗಿಸಿದರು.
ಮೀನು ಸಾಕಣೆ ಕ್ರಮ, ಆಹಾರ ಪದ್ಧತಿ, ಆಮ್ಲಜನಕ ವ್ಯವಸ್ಥೆ, ಮಾರುಕಟ್ಟೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಮಾಹಿತಿ ಫಲಕಗಳನ್ನು ಪ್ರದರ್ಶಿಸಿದರು.
ಮೀನು ಕೃಷಿಕರು, ಯುವಸಮೂಹ, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಭಿಕರು, ಅಕ್ವೇರಿಯಂನಲ್ಲಿ ಇರಿಸಿದ್ದ ಮೀನುಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿ ಪಡೆದರು.
ಒಡಿಶಾದ ಕೇಂದ್ರೀಯ ಸಿಹಿ ನೀರು ಜಲಕೃಷಿ ಸಂಸ್ಥೆಯ ಮಳಿಗೆಯೂ ಇತ್ತು. ಸಮಗ್ರ ಮೀನು ಕೃಷಿ ಭಾಗವಾಗಿ ಮುತ್ತು ಉತ್ಪಾದನೆ ಹಾಗೂ ಇತರೆ ಪರ್ಯಾಯ ಉತ್ಪನ್ನಗಳ ಬಗ್ಗೆ ತಜ್ಞರು ವಿವರಿಸಿದರು.
ಮೀನುಗಾರಿಕೆ ಇಲಾಖೆ, ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳ, ಕರ್ನಾಟಕ ಮೀನು ಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಮಳಿಗೆಗಳು ಗಮನಸೆಳೆದವು.
ಕಡಿಮೆ ಜಾಗದಲ್ಲಿ ಮೀನು ಸಾಕಬಹುದಾದ ಬಯೋಪ್ಲಾಕ್, ಅಕ್ವಾಪೋನಿಕ್ಸ್ ಹಾಗೂ ಪಂಜರದಲ್ಲಿ ಮೀನು ಕೃಷಿ ಬಗ್ಗೆಯೂ ತಜ್ಞರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸ್ಥಳದಲ್ಲೇ ಮೀನು ಖಾದ್ಯದ ಮಳಿಗೆಗಳೂ ಇದ್ದವು. ವೀಕ್ಷಕರು ತಮ್ಮಿಷ್ಟದ ಮೀನುಗಳ ರುಚಿ ಸವಿದರು.
ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸಮಾವೇಶ ಉದ್ಘಾಟಿಸಿದರು.
ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ, ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಕೋಟ ಶ್ರೀನಿವಾಸ್ ಪೂಜಾರಿ, ಬಿ.ಸಿ.ನಾಗೇಶ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಹಾಗೂ ಇಂಡಿಯನ್ ಮನಿ ಡಾಟ್ ಕಾಮ್ ಸಂಸ್ಥಾಪಕ ಸಿ.ಎಸ್. ಸುಧೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.