ಬೆಂಗಳೂರು: ವಿರೋಧ ಪಕ್ಷದ ಸದಸ್ಯರ ಗೈರುಹಾಜರಿಯ ಮಧ್ಯೆಯೇ ಐದು ತಿದ್ದುಪಡಿ ಮಸೂದೆಗಳಿಗೆ ಗುರುವಾರ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಸಿವಿಲ್ ಪ್ರಕ್ರಿಯಾ ಸಂಹಿತೆ, ಕರ್ನಾಟಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ಮಸೂದೆಗಳನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ, ಕರ್ನಾಟಕ ಭೂ ಕಂದಾಯ, ನೋಂದಣಿ ಮಸೂದೆಗಳನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕರ್ನಾಟಕ ಸಹಕಾರ ಸಂಘಗಳ ಮಸೂದೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಡಿಸಿದರು.
ಮಸೂದೆಗಳ ಪರವಾಗಿ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್, ಕಾಂಗ್ರೆಸ್‌ನ ಜಗದೀಶ ಶೆಟ್ಟರ್, ನಜೀರ್ ಅಹಮದ್, ಯು.ಬಿ.ವೆಂಕಟೇಶ್, ಪ್ರಕಾಶ್ ಹುಕ್ಕೇರಿ, ಬಿಜೆಪಿಯ ಎಚ್.ವಿಶ್ವನಾಥ್, ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿದರು.
‘ಸರ್ಕಾರಿ ವ್ಯಾಜ್ಯಗಳನ್ನು ಲೋಕ ಅದಾಲತ್ ಮಾದರಿಯಲ್ಲಿ ನಿರ್ವಹಿಸಿದರೆ ಕೋರ್ಟ್ ಒತ್ತಡವನ್ನೂ ಕಡಿಮೆ ಮಾಡಬಹುದು. ಸರ್ಕಾರ ಹಾಗೂ ಜನರಿಗೂ ಒಳಿತಾಗುತ್ತದೆ. ಆಸ್ತಿ ದಾಖಲೆಗಳನ್ನು ನಕಲು ಮಾಡಿ ಮಾರಾಟ ಮಾಡುವ ಜಾಲ ನಿಯಂತ್ರಣಕ್ಕೆ ನೋಂದಣಿ ತಿದ್ದುಪಡಿ ಸಹಕಾರಿಯಾಗುತ್ತದೆ. ಹಾಗೆಯೇ, ತಪ್ಪು ಎಸಗುವ ನೋಂದಣಾಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಜಗದೀಶ ಶೆಟ್ಟರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.