ADVERTISEMENT

ಐದು ನಿಗಮಗಳ 700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ: ‘ಪರೀಕ್ಷಾ ಶುಲ್ಕ’ದ ಹೊರೆ!

ಐದು ನಿಗಮಗಳ 700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
   

ಬೆಂಗಳೂರು: ರಾಜ್ಯ ಸರ್ಕಾರದ ಅಡಿಯಲ್ಲಿರುವ ಐದು ನಿಗಮಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 700ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳಿಗೆ ನಿಗದಿಪಡಿಸಿದ ‘ಪರೀಕ್ಷಾ ಶುಲ್ಕ’ ಕಂಡು‌ ಉದ್ಯೋಗಾಕಾಂಕ್ಷಿಗಳು ಬೆಚ್ಚಿದ್ದಾರೆ.

ಪ್ರತಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳ (ಪ್ರವರ್ಗ 2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ ₹1,000 ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳು ₹750, ಅಂಗವಿಕಲ ಮತ್ತು ಮಾಜಿ ಸೈನಿಕರು ₹250 ಶುಲ್ಕ ಕಟ್ಟಬೇಕು.

ಆಹಾರ ಮತ್ತು ನಾಗಕರಿಕ ಸರಬರಾಜು ನಿಗಮ, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಲ್ಲಿ (ಎಂಎಸ್‌ಐಎಲ್‌) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೆಇಎ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಜುಲೈ 22 ಕೊನೆ ದಿನ.

ADVERTISEMENT

ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವರು ಮತ್ತು ಕೆಇಎಗೆ ಉದ್ಯೋಗಾಕಾಂಕ್ಷಿಗಳು ಸರಣಿ ಟ್ವೀಟ್‌ ಮಾಡಿದ್ದಾರೆ.

‘ಸ್ಪರ್ಧಾರ್ಥಿಗಳಲ್ಲಿ ಬಡವರೇ ಅತೀ ಹೆಚ್ಚು. ₹10 ಖರ್ಚು ಮಾಡಲು ಹತ್ತು ಬಾರಿ ಯೋಚಿಸುವ ಪರಿಸ್ಥಿತಿ ಇರುವಾಗ ಪ್ರತಿ ಹುದ್ದೆಯ ಪರೀಕ್ಷೆಗೆ ₹1,000 ಶುಲ್ಕ ವಿಧಿಸಿರುವುದು ದೊಡ್ಡ ಹೊರೆ’ ಎಂದು ಅಭ್ಯರ್ಥಿಗಳು ಅಲವತ್ತುಕೊಂಡಿದ್ದಾರೆ.

‘ಏನಿದು ಲೂಟಿ. ನಾಚಿಕೆ ಆಗಲ್ಲವೇ? ಬಡವರು ಎಲ್ಲಿಂದ ಹಣ ತುರುವುದು’ ಎಂದು ಆರ್‌. ರವಿ ಎಂಬವರು ಪ್ರಶ್ನಿಸಿದರೆ, ‘ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡಲು ಬಡ ವಿದ್ಯಾರ್ಥಿಗಳಿಂದ ಹೆಚ್ಚು ಪರೀಕ್ಷಾ ಶುಲ್ಕ ವಸೂಲಿಗೆ ಸರ್ಕಾರ ಇಳಿದಿದೆ. ಕಳೆದ ವರ್ಷ ನಡೆಸಿದ್ದ ಕೆಪಿಟಿಸಿಎಲ್‌ ಪರೀಕ್ಷೆಗೆ ₹500 ಶುಲ್ಕ ವಿಧಿಸಿದ್ದ ಕೆಇಎ, ಒಂದೇ ವರ್ಷದಲ್ಲಿ ಶುಲ್ಕವನ್ನು ಇಮ್ಮಡಿ ಮಾಡಿದೆ’ ಎಂದು ನವೀನ್‌ಕುಮಾರ್‌ ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ. ಈ ಅಭ್ಯರ್ಥಿಗಳು ₹35 ಅರ್ಜಿ ಪ್ರೊಸೆಸಿಂಗ್‌ ಶುಲ್ಕ ಮಾತ್ರ ಕಟ್ಟಬೇಕು. ಆದರೆ, ಕೆಇಎ ಬಡ ಅಭ್ಯರ್ಥಿಗಳಿಂದ ಹಣ ಕಿತ್ತುಕೊಳ್ಳಲು ಮುಂದಾಗಿದೆ. ಸಾಮಾನ್ಯ ಅಭ್ಯರ್ಥಿಯೊಬ್ಬ ಬೇರೆ ಬೇರೆ ವೃಂದದ 10 ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿದ್ದರೆ ₹10 ಸಾವಿರ ಪರೀಕ್ಷಾ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಸುಲಿಗೆ ಅಲ್ಲವೇ’ ಎಂದು ವಿನಯ್‌ ಕುಮಾರ್‌ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.