ADVERTISEMENT

ಜೋಗ ಬಳಿ ಪಂಚತಾರಾ ಹೋಟೆಲ್‌?

ಶರಾವತಿ ನದಿಯ ಇಕ್ಕೆಲಗಳಲ್ಲಿ ರೋಪ್‌ವೇ: ಎರಡು ಬಾರಿ ‍ಪ್ರಸ್ತಾವನೆ ತಿರಸ್ಕೃತ

ಎಸ್.ರವಿಪ್ರಕಾಶ್
Published 8 ಆಗಸ್ಟ್ 2024, 23:35 IST
Last Updated 8 ಆಗಸ್ಟ್ 2024, 23:35 IST
ಜೋಗ್‌ ಜಲಪಾತ
ಜೋಗ್‌ ಜಲಪಾತ   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಬಳಿಯ ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೆಲ್‌ ಮತ್ತು ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ.

‘ಜೋಗ ಜಲಪಾತ ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಅರಣ್ಯಭೂಮಿ ವರ್ಗಾಯಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದು, ಪರ್ಯಾಯವಾಗಿ ನಾಗರಿಕ ಉದ್ದೇಶಕ್ಕೆ ಮೀಸಲಾದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಅವರು ಒಪ್ಪಿಗೆ ನೀಡಿದ್ದಾರೆ.

ಪಂಚತಾರಾ ಹೋಟೆಲ್‌ ನಿರ್ಮಿಸಲು ಆಯ್ಕೆ ಮಾಡಿರುವ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ 2014 ರಲ್ಲಿ ಮೊದಲ ಬಾರಿಗೆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ 2021 ರಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿತ್ತು. 

ADVERTISEMENT

‘ಕೇರಳದ ವಯನಾಡ್‌ ಮತ್ತು ಕರ್ನಾಟಕದ ಅಂಕೋಲ ಸಮೀಪದ ಶಿರೂರಿನಂತೆ ಶರಾವತಿ ಕಣಿವೆಯೂ ಪರಿಸರ ಸೂಕ್ಷ್ಮ ಪ್ರದೇಶ. ಮುಂದೆ ಇಲ್ಲಿನ ಪರಿಸ್ಥಿತಿ ಹೇಗಿರುತ್ತದೆಯೋ ಹೇಳಲಾಗದು. ಆದ್ದರಿಂದ ಅಲ್ಲಿ ಪಂಚತಾರಾ ಹೋಟೆಲ್‌ ನಿರ್ಮಿಸುವ ಅಗತ್ಯವಿಲ್ಲ’ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಹೋಟೆಲ್‌ ಮತ್ತು ರೋಪ್‌ ವೇ ನಿರ್ಮಿಸಲು ಗುರುತಿಸಿರುವ ಪ್ರದೇಶ ಉತ್ತರಕನ್ನಡ ಜಿಲ್ಲೆಯ ಕೋಡ್ಕಣಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ತಲಕಳಲೆ ಮತ್ತು ಕಾರ್ಗಲ್‌ ಗ್ರಾಮಗಳ ವ್ಯಾಪ್ತಿಯಲ್ಲಿದೆ. ಒಟ್ಟು ಐದು ಎಕರೆ 9 ಗುಂಟೆ ಜಮೀನಿನಲ್ಲಿ ಈ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ. ಭೂಮಿಪುತ್ರ ರೆಸಾರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೋಟೆಲ್‌ ನಿರ್ಮಿಸಲಿದೆ.

ಶಿವಮೊಗ್ಗ ಜಿಲ್ಲಾಧಿಕಾರಿಯೂ ಆಗಿರುವ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಹೋಟೆಲ್‌ ನಿರ್ಮಾಣದ ಅನುಮತಿಗಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ  ‘ಪರಿವೇಶ್‌’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಅರಣ್ಯವನ್ನು ಬಳಸಿಕೊಳ್ಳುವ ಮಾಹಿತಿಯೂ ಉಲ್ಲೇಖವಾಗಿದೆ.

2014 ರಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆಗ ಆಯುರ್ವೇದ ಕೇಂದ್ರ ಮತ್ತು ವೆಲ್‌ನೆಸ್‌ ಸೆಂಟರ್‌ ನಿರ್ಮಿಸುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿತ್ತು. 2021 ರಲ್ಲಿ ಪಂಚತಾರಾ ಹೋಟೆಲ್‌ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಆಗ ವನ್ಯಜೀವಿ ವಿಭಾಗದ ಅನುಮತಿ ಸಿಕ್ಕಿರಲಿಲ್ಲ.

ಪ್ರಸ್ತಾವನೆಯಲ್ಲಿರುವ ಅಂಶ:

ಜೋಗಕ್ಕೆ ಪ್ರತಿವರ್ಷ ಲಕ್ಷಗಟ್ಟಲೆ ಪ್ರವಾಸಿಗರು ಬರುತ್ತಾರೆ. ವಿಶೇಷವಾಗಿ ಜೂನ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಪ್ರತಿದಿನ 40 ಸಾವಿರದಿಂದ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಉತ್ತಮವಾದ ಹೊಟೇಲ್‌ ಇಲ್ಲ. ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಇದ್ದು ಅದನ್ನು ಒಡೆದು ಪಿಪಿಪಿ ಮಾದರಿಯಲ್ಲಿ ಪಂಚತಾರಾ ಹೋಟೆಲ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಜಲಪಾತದ ಸಮೀಪವೇ ಶರಾವತಿ ನದಿಗೆ ಒಂದು ತಟದಿಂದ ಇನ್ನೊಂದು ತಟಕ್ಕೆ ರೋಪ್‌ವೇ ಹಾಕಲಾಗುವುದು. ಇವೆರಡರ ನಿರ್ಮಾಣದ ಅಂದಾಜು ವೆಚ್ಚ ₹100 ಕೋಟಿ.

ಶರಾವತಿ ಕಣಿವೆ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ. ಪಶ್ಚಿಮಘಟ್ಟದ ಸಂರಕ್ಷಣೆ ಬಗ್ಗೆ ಅತೀವ ಕಾಳಜಿ ಹೊಂದಿರುವ ಅರಣ್ಯ ಸಚಿವ ಈಶ್ವರಖಂಡ್ರೆ ಇಂತಹ ಯೋಜನೆಗಳಿಗೆ ಅನುಮತಿ ನೀಡದೆ ಪಶ್ಚಿಮಘಟ್ಟದ ಸಂರಕ್ಷಣೆಗೆ ಮುಂದಾಗಬೇಕು. 
ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.