ಬೆಂಗಳೂರು: ‘ಭೂಸ್ವಾಧೀನ ವಿಚಾರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರು ಹೊರವಲಯದ ಐದು ಕಡೆ ಗೃಹ ಮಂಡಳಿ ವತಿಯಿಂದ ಟೌನ್‌ಶಿಪ್ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಈ ಸಂಬಂಧ ಗೃಹ ಮಂಡಳಿ ಕಚೇರಿಯಲ್ಲಿ ಶಾಸಕರ ಜತೆ ಗುರುವಾರ ಸಭೆ ನಡೆಸಿದ ಸಚಿವರು, ‘ಟೌನ್‌ಶಿಪ್ ನಿರ್ಮಾಣಕ್ಕೆ ಅಗತ್ಯವಾದ ಜಮೀನು ಸ್ವಾಧೀನಪಡಿಸುವ ಸಂಬಂಧ ರೈತರ ಅದಾಲತ್ ನಡೆಸಲಾಗುವುದು. ರೈತರ ಒಪ್ಪಿಗೆ ಪಡೆದ ನಂತರವೇ ಮುಂದಿನ ಪ್ರಕ್ರಿಯೆ ನಡೆಸಲಾಗುವುದು’ ಎಂದರು.
‘ದಾಬಸ್ ಪೇಟೆ, ಸೋಲೂರು, ಹೊಸಕೋಟೆ, ಬಿಡದಿ, ರಾಮನಗರ ಭಾಗದಲ್ಲಿ ಜಮೀನು ಲಭ್ಯತೆ ಆಧಾರದಲ್ಲಿ ಟೌನ್‌ಶಿಪ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಅದಕ್ಕೂ ಮೊದಲು ಸ್ಥಳೀಯ ರೈತರ ಅದಾಲತ್ ನಡೆಸುವ ಬಗ್ಗೆ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.
‘ರೈತರು ಸ್ವಯಂಪ್ರೇರಿತರಾಗಿ 50:50 ಹಂಚಿಕೆ ಆಧಾರದಲ್ಲಿ ಜಮೀನು ನೀಡಲು ಒಪ್ಪಿದರೆ ಭೂಸ್ವಾಧೀನ ಮಾಡಿಕೊಳ್ಳಲು ನಮ್ಮ ವಿರೋಧ ಇಲ್ಲ’ ಎಂದು ಸಭೆಯಲ್ಲಿದ್ದ ಶಾಸಕರಾದ ಹೊಸಕೋಟೆಯ ಶರತ್ ಬಚ್ಚೇಗೌಡ, ಮಾಗಡಿಯ ಎಚ್.ಸಿ. ಬಾಲಕೃಷ್ಣ, ನೆಲಮಂಗಲದ ಎನ್. ಶ್ರೀನಿವಾಸ್, ದೊಡ್ಡಬಳ್ಳಾಪುರದ ಧೀರಜ್ ಮುನಿರಾಜು ಹೇಳಿದರು.
ಐದು ಕಡೆ ತಲಾ ಎರಡು ಸಾವಿರ ಎಕರೆ ಜಾಗದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಲು ಗೃಹ ಮಂಡಳಿಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇ ಗೌಡ, ಆಯುಕ್ತೆ ಕವಿತಾ ಮಣ್ಣಿಕೇರಿ, ಮುಖ್ಯ ಎಂಜಿನಿಯರ್ ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.