ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಬಿಟ್ಟು ಏರ್ ಏಷ್ಯಾ ವಿಮಾನ ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ರಾಜ್ಯಪಾಲರ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ‘ಪ್ರೋಟೋಕಾಲ್ ಉಲ್ಲಂಘನೆ’ ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಗುರುವಾರದಂದು (ಜು.27) ಹೈದರಾಬಾದ್‌ಗೆ ತೆರಳಬೇಕಿದ್ದ ಥಾವರ್ ಚಂದ್ ಗೆಹಲೋತ್ ಅವರನ್ನು ಬಿಟ್ಟು ಏರ್ ಏಷ್ಯಾ ವಿಮಾನ ಹಾರಾಟ ನಡೆಸಿತ್ತು.
ಗುರುವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಜ್ಯಪಾಲರು, 2 ಗಂಟೆಗೆ ವಿಮಾನದ ಮೂಲಕ ಹೈದರಾಬಾದ್‌ಗೆ ಹೋಗುವುದಿತ್ತು. ರಾಜ್ಯಪಾಲರನ್ನು ವಿಐಪಿ ಲಾಂಜ್‌ನಲ್ಲಿ ಕುಳ್ಳಿರಿಸಿದ ಅಧಿಕಾರಿಗಳು, ಅವರ ಲಗೇಜ್‌ಗಳನ್ನು ವಿಮಾನದಲ್ಲಿ ಇರಿಸಲು ಏರ್ ಏಷ್ಯಾದ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.
ಲಗೇಜ್ ಹಾಕಿಸಿಕೊಂಡ ವಿಮಾನದ ಸಿಬ್ಬಂದಿ, ಅವರನ್ನು ಬಿಟ್ಟು ಹೈದರಾಬಾದ್ ಕಡೆಗೆ ಹಾರಾಟ ನಡೆಸಿದ್ದಾರೆ. ಒಂದು ನಿಮಿಷ ತಡವಾಗಿ ಬಂದಿದ್ದಕ್ಕೆ ರಾಜ್ಯಪಾಲರಿಗೆ ವಿಮಾನ ತಪ್ಪಿದೆ.
ಮಧ್ಯಾಹ್ನ 2 ಗಂಟೆಗಿದ್ದ ವಿಮಾನ ಹತ್ತಲು 1.30ಕ್ಕೆ ರಾಜ್ಯಪಾಲರು ಬಂದಿದ್ದರು. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವರಿಗೆ ವಿಮಾನ ತಪ್ಪಿದೆ. ನಂತರ ಇನ್ನೊಂದು ವಿಮಾನದ ಮೂಲಕ ಹೈದಾರಬಾದ್‌ಗೆ ಪ್ರಯಾಣ ಬೆಳೆಸಿದರು ಎಂದು ತಿಳಿದು ಬಂದಿದೆ.
ವಿಐಪಿ ಲಾಂಜ್‌ನಲ್ಲಿ ಅವರನ್ನು ಕುಳ್ಳರಿಸಿ, ಸೂಕ್ತವಾಗಿ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಲ್ಲಿ ಅಧಿಕಾರಿಗಳು ಎಡವಿದ್ದು, ಹಿರಿಯ ಅಧಿಕಾರಿಗಳು ಘಟನೆ ಕುರಿತು ಮಾಹಿತಿ ಕೇಳಿದ್ದಾರೆ.
ವಿಷಾದ ವ್ಯಕ್ತಪಡಿಸಿದ ಏರ್ ಏಷ್ಯಾ: ರಾಜ್ಯಪಾಲರನ್ನು ಬಿಟ್ಟು ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವೃತ್ತಿಪರತೆಯ ಮಾನದಂಡಗಳು ಮತ್ತು ಪ್ರೋಟೋಕಾಲ್ ಅನುಸರಣೆಯ ಬದ್ಧತೆಯನ್ನು ಹೊಂದಿರುತ್ತೇವೆ. ಸಮಸ್ಯೆ ಪರಿಹರಿಸುವವರೆಗೆ ರಾಜ್ಯಪಾಲರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಏರ್ ಏಷ್ಯಾ ಸ್ಪಷ್ಟಪಡಿಸಿದೆ.
ಇದನ್ನೂ ಓದಿ... ಒಂದು ನಿಮಿಷ ತಡ: ರಾಜ್ಯಪಾಲ ಥಾವರಚಂದ್ ಅವರನ್ನು ಬಿಟ್ಟು ಹಾರಿದ Air Asia ವಿಮಾನ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.