ADVERTISEMENT

ವಿದ್ಯುತ್‌ ಉತ್ಪಾದನೆಗೆ ‘ತೇಲುವ ಸೌರ ವಿದ್ಯುತ್‌ ಫಲಕ: ಎನ್‌.ಎಸ್‌.ಭೋಸರಾಜು

ಕೆರೆಗಳಲ್ಲಿ ಯೋಜನೆ ಜಾರಿ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 23:52 IST
Last Updated 11 ಜುಲೈ 2024, 23:52 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್‌ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಸಾಧ್ಯತೆ ಕುರಿತು ಚರ್ಚಿಸಲು ತಜ್ಞರ ಜತೆ ಸಭೆಯೊಂದನ್ನು ಆಯೋಜಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಭೋಸರಾಜು ಸೂಚಿಸಿದರು.

ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಇಲಾಖೆ ವ್ಯಾಪ್ತಿಯಲ್ಲಿರುವ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುತ್ತಿರುವ 100 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ 40 ಕೆರೆಗಳನ್ನು ಗುರುತಿಸಲಾಗಿದೆ. ಈ ಕೆರೆಗಳು ಸುಮಾರು 10 ಸಾವಿರ ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 2,500 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶವಿದೆ’ ಎಂದರು.

ADVERTISEMENT

‘ಈ ಕೆರೆಗಳಲ್ಲಿ ವರ್ಷದಾದ್ಯಂತ ಶೇ 50 ರಿಂದ ಶೇ 60 ರಷ್ಟು ನೀರು ತುಂಬಿಸಲಾಗುತ್ತದೆ. ಈ ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್‌ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಯೋಜನೆ ಮೂಲಕ ಏತ ನೀರಾವರಿ ಯೋಜನೆಗಳಿಗೆ ಭರಿಸಲಾಗುತ್ತಿರುವ ವಿದ್ಯುತ್‌ ವೆಚ್ಚವನ್ನು ಕಡಿತಗೊಳಿಸುವುದು ನಮ್ಮ ಆದ್ಯತೆ’ ಎಂದು ತಿಳಿಸಿದರು.

‘ದೇಶದ ವಿವಿಧ ಭಾಗಗಳಲ್ಲಿ ತೇಲುವ ಸೌರ ವಿದ್ಯುತ್‌ ಫಲಕಗಳ ಅಳವಡಿಕೆ ಮೂಲಕ ಒಂದು ಗಿಗಾ ವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ತೇಲುವ ಸೌರ ವಿದ್ಯುತ್‌ ಫಲಕಗಳ ಅಳವಡಿಕೆಗೆ ವಿಪುಲ ಅವಕಾಶಗಳಿವೆ. ಇದಕ್ಕೆ ಜಮೀನಿನ ಅವಶ್ಯವೂ ಇಲ್ಲ. ಆದರೆ, ಇದರ ಅಳವಡಿಕೆ ವೆಚ್ಚ ಸ್ವಲ್ಪ ಹೆಚ್ಚು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ರಾಘವನ್‌, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.