ADVERTISEMENT

ಅತಿವೃಷ್ಟಿ ನಿರ್ವಹಣೆ | ಸರ್ಕಾರ ಸಂಪೂರ್ಣ ವಿಫಲ: ವಿಶ್ವನಾಥ್‌ ಆರೋಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 7:58 IST
Last Updated 23 ಅಕ್ಟೋಬರ್ 2024, 7:58 IST
ಎ.ಎಚ್. ವಿಶ್ವನಾಥ್
ಎ.ಎಚ್. ವಿಶ್ವನಾಥ್   

ಮೈಸೂರು: ‘ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅತಿವೃಷ್ಟಿ ನಿರ್ವಹಣೆಯಲ್ಲಿ ಹಾಗೂ ತೊಂದರೆಗೆ ಒಳಗಾದ ಜನರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯ ಎ. ಎಚ್. ವಿಶ್ವನಾಥ್‌ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಜನರು ಬೋಟ್‌ನಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ. ಜಲಾವೃತವಾಗಿರುವ ಬಹುಮಹಡಿ ಕಟ್ಟಡಗಳ ಜನರು ನೀರು, ಆಹಾರ, ಔಷಧಿಗೆ ಪರದಾಡುತ್ತಿದ್ದಾರೆ. ಹೀಗಿದ್ದರೂ, ನಮಗೆ ಸಂಬಂಧವೇ ಇಲ್ಲದ ರೀತಿಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘ಸಿ.ಪಿ. ಯೋಗೇಶ್ವರ್‌ ಸೀಮೆಗಿಲ್ಲದ ಅಭ್ಯರ್ಥಿನಾ? ಕಾಂಗ್ರೆಸ್‌ಗೆ ಬಂದಿರುವ ಅವರು ಆ ಪಕ್ಷದ ವಿನ್ಯಾಸವನ್ನೇ ಬದಲಾಯಿಸಿ ಬಿಡುತ್ತಾರೆಯೇ? ಈ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಯೋಗೇಶ್ವರ್ ಸೇರ್ಪಡೆಯಿಂದ ಕಾಂಗ್ರೆಸ್ ಸೋತಿದೆ. ಆತ ಯೋಗ್ಯ ಅಭ್ಯರ್ಥಿಯಲ್ಲ. ಆ ಪಕ್ಷಕ್ಕೆ ಈ ಸ್ಥಿತಿ ಬರಬಾರದಿತ್ತು. ಸಿದ್ದರಾಮಯ್ಯ ಆ ಪಕ್ಷವನ್ನು ‌ಉಳಿಸುವುದಿಲ್ಲ. ನಿಮ್ಮ ನಂತರ ಯಾರೆಂದರೆ, ಜಲಪ್ರಳಯ ಆಗಬೇಕು ಎಂಬ ಮನಸ್ಥಿತಿ ‌ಇರುವ 16ನೇ ಲೂಯಿ ಅವರು’ ಎಂದು ಟೀಕಿಸಿದರು.

‘ನಾನು ಹುಣಸೂರು ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ, ಬಿ.ಎಸ್. ಯಡಿಯೂರಪ್ಪ ಅವರು ಕಳುಹಿಸಿಕೊಟ್ಟದ್ದ ಸಾಮಗ್ರಿ ಹಾಗೂ ಹಣವನ್ನೆಲ್ಲ ಹೊತ್ತುಕೊಂಡು ಓಡಿ ಹೋಗಿದ್ದ ವಂಚಕ ಯೋಗೇಶ್ವರ್. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್‌ನವರು ಸೇರಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಈ ಉಪ ಚುನಾವಣೆಯ ಸೋಲು ಅಥವಾ ಗೆಲುವು ಸರ್ಕಾರದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೂ ಇಷ್ಟೊಂದು ತಲೆಕೆಡಿಸಿಕೊಂಡಿರುವುದೇಕೆ?’ ಎಂದು ಕೇಳಿದರು.

‘ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟೀಕರಣ ಕೊಡಲು ಬಂದಿದ್ದರಷ್ಟೆ. ನನಗೆ ಮೈಸೂರಿನಲ್ಲಿ ಮನೆ ಇಲ್ಲ; ಕಪ್ಪುಚುಕ್ಕೆ ಇಲ್ಲೆ ಎಂದೆಲ್ಲಾ ಹೇಳಿಕೊಂಡಿದ್ದಾರೆ. ರಾಜ್ಯ ಹಾಗೂ ಮೈಸೂರಿನ ‌ಜನ ದಡ್ಡರಲ್ಲ. ಎಷ್ಟು ಸುಳ್ಳು ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಭ್ರಷ್ಟ ಎಂಬುದನ್ನು ರಾಜ್ಯದ ಜನರು ತೀರ್ಮಾನಿಸಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಎಷ್ಟು ಸತ್ಯವಂತ ಎಂಬುದನ್ನು ಅವರ ಸೊಸೆ ಹಾಗೂ ಪುತ್ರನ ಹೆಸರಲ್ಲಿ ₹ 350 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಮಾಡಿರುವ ಪಬ್‌ ನೋಡಿದರೆ ಗೊತ್ತಾಗುತ್ತದೆ. ಇದೆಲ್ಲದಕ್ಕೂ ಭೈರತಿ ಸುರೇಶ್ ಕಾರಣ. ಅವನನ್ನು ಒಳಗಡೆ ಹಾಕಿದರೆ ಹಲವು ವಿಚಾರಗಳು ಹೊರಬರುತ್ತವೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಹಾಗೂ ಭೈರತಿ ಸುರೇಶ್ ಇಡೀ ಕುರುಬ ಸಮಾಜಕ್ಕೇ ಮಸಿ ಬಳಿದಿದ್ದಾರೆ. ಇಡೀ ರಾಜ್ಯ ವಂಚಕರ ಸಂತೆಯಾಗಲು ಸಿದ್ದರಾಮಯ್ಯ ನೇರ ಕಾರಣ. ಜೈಲಿಗೆ ಹೋಗಿ ಬಂದ ಮಾಜಿ ಸಚಿವನನ್ನು ಪೇಟ, ಶಾಲು ಹಾಕಿ ಬರಮಾಡಿಕೊಳ್ಳುತ್ತೀರಲ್ಲಾ ನಾಚಿಕೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ರಾಜ್ಯದ ಆರ್ಥಿಕ ‌ಸ್ಥಿತಿ ಹೀನಾಯವಾಗಿದೆ. ವೃದ್ಧಾಪ್ಯ ವೇತನ‌ ಕೊಡುವುದಕ್ಕೂ ಈ ಸರ್ಕಾರದಿಂದ ಆಗುತ್ತಿಲ್ಲ’ ಎಂದು ಅರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.