ಬೆಂಗಳೂರು: ಕಂಡು ಕೇಳರಿಯದ ನೆರೆಗೆ ತುತ್ತಾಗಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಕೇವಲ ₹669.85 ಕೋಟಿ!
ಎರಡನೇ ಕಂತಿನಲ್ಲಿ ₹1,869.85 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ
ಸೋಮವಾರ ತಿಳಿಸಿತ್ತು.
‘ಮೊದಲ ಕಂತಿನಲ್ಲಿ ₹1,200 ಕೋಟಿ ಬಿಡುಗಡೆಯಾಗಿದ್ದು, ಈಗ ₹669.85 ಕೋಟಿ ಮಾತ್ರ ನೀಡಲಾಗಿದೆ. ಎರಡೂ ಕಂತಿನ ಹಣ ಸೇರಿದರೆ ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ ಎಂದು ಹೇಳಲಾಗಿರುವ ಮೊತ್ತಕ್ಕೆ ಸಮನಾಗಿರುತ್ತದೆ’ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಹಣ ಸಾಲದು:‘ಪ್ರಧಾನಿ ಮೋದಿ ರಾಜ್ಯಕ್ಕೆ ಬಂದುಹೋದ ತಕ್ಷಣ ಪರಿಹಾರ ಬಿಡುಗಡೆಯಾಗಿದೆ.ಮೊದಲ ಕಂತು ಸೇರಿದಂತೆ ಒಟ್ಟು ₹3,069.85 ಕೋಟಿ ಬಿಡುಗಡೆ ಮಾಡಿದೆ. ಈಗ ಬಿಡುಗಡೆಯಾಗಿರುವ ಹಣ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರವನ್ನು ಬಿಡುಗಡೆ ಮಾಡಲಿದೆ’ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಟೀಕೆ: ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಸಾಲ ಮನ್ನಾ ಮಾಡಲಾಗುವುದು ಎಂದು ಪ್ರಮಾಣ ಮಾಡಿದ ‘ಸಾಂದರ್ಭಿಕ ಶಿಶು’ ಹಿಂಬಾಗಿಲಿನಿಂದ ಮುಖ್ಯಮಂತ್ರಿಯಾದರೂ ರೈತರ ಕೈ ಹಿಡಿಯಲಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
‘ಅರೆಕಾಸಿನ ಮಜ್ಜಿಗೆ’
ಕೇಂದ್ರ ಸರ್ಕಾರ ನೀಡಿರುವ ₹669 ಕೋಟಿ ಹೆಚ್ಚುವರಿ ಪರಿಹಾರ, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ‘ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು, ಪರಿಹಾರದ ಮೊತ್ತ ₹1,200 ಕೋಟಿ ಹಾಗೂ ₹1,869 ಕೋಟಿ ಸೇರಿ ₹3,069 ಕೋಟಿ ಎಂದು ಹೇಳಿಕೊಂಡು ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ’ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.