ಮಡಿಕೇರಿ: ‘ಇಳಿದು ಹೋಗಮ್ಮ ಕಾವೇರಿ ತಾಯಿ...’ ಎಂಬ ಸಂತ್ರಸ್ತರ ಮೊರೆ ಮಾತ್ರ ‘ಜೀವನದಿ’ಗೆ ಕೇಳಿಸುತ್ತಿಲ್ಲ. ಕೊಡಗಿನಲ್ಲಿ ಸುರಿದ ಮಹಾಮಳೆಗೆ ಹಲವು ಗ್ರಾಮಗಳು ದ್ವೀಪದಂತಾಗಿವೆ. ಪ್ರವಾಹದಿಂದ ಮನೆ ಕಳೆದುಕೊಂಡವರು ಪರಿಹಾರ ಕೇಂದ್ರ ಸೇರಿದ್ದಾರೆ.
ನದಿಯ ಆಸುಪಾಸಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ದಿನನಿತ್ಯದ ವಸ್ತುಗಳಿಗೂ ಪರದಾಡುವ ಸ್ಥಿತಿಯಿದೆ. ಸಾವಿರಾರು ಜನರು ಎಂಟು ದಿನಗಳಿಂದ ಕತ್ತಲೆಯ ಕೂಪದಲ್ಲಿ ಕಾಲ ಕಳೆಯುತ್ತಿದ್ದಾರೆ.ಕಾವೇರಿ ನದಿ ಪ್ರವಾಹ ಮತ್ತಷ್ಟು ವ್ಯಾಪಿಸುತ್ತಲೇ ಇದೆ.
ನಾಪೋಕ್ಲು ವ್ಯಾಪ್ತಿಯ ಹಲವು ಗ್ರಾಮಗಳು ಪ್ರವಾಹಕ್ಕೆ ತತ್ತರಿಸಿವೆ. ಸುರಕ್ಷಿತ ಪ್ರದೇಶದ ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತವಾಗಿ ವಾರ ಕಳೆದಿದೆ. ಹಾಲು, ಔಷಧಿ, ತರಕಾರಿ, ಅಕ್ಕಿ, ಬೇಳೆ ಪೂರೈಸಲು ರಸ್ತೆಗಳೇ ಇಲ್ಲ. ಸುತ್ತಲೂ ನೀರಿದ್ದರೂ ಅವರಿಗೆ ಕುಡಿಯಲು ನೀರಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಮನೆಯ ಸೂರಿನಿಂದ ಬೀಳುವ ಮಳೆ ನೀರನ್ನೇ ಸುರಕ್ಷಿತ ಪ್ರದೇಶದಲ್ಲಿದ್ದ ಜನರು ಬಳಸುತ್ತಿದ್ದಾರೆ. ಮಕ್ಕಳ ಆಕ್ರಂದನ ಹೆಚ್ಚುತ್ತಿದೆ. ವಯೋವೃದ್ಧರು ಥಂಡಿಗೆ ನಡುಗುತ್ತಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಪರಿಹಾರ ಕೇಂದ್ರಕ್ಕೆ ಸ್ಥಳೀಯ ಅಂಗಡಿಯಿಂದ ದಿನಸಿ ಖರೀದಿಸುವ ಸ್ಥಿತಿ ಬಂದಿದೆ. ಅಂಗಡಿಗಳಲ್ಲೂ ದಿನಸಿ ಖಾಲಿಯಾದರೆ ದೋಣಿ ಮೂಲಕವೇ ಹೋಗಬೇಕು. ಇನ್ನೆರಡು ದಿನ ಪ್ರವಾಹ ಮುಂದುವರೆದರೆ ಪರಿಸ್ಥಿತಿ ಊಹಿಸಲು ಅಸಾಧ್ಯ ಎಂದು ಅಧಿಕಾರಿಗಳೇ ಹೇಳುತ್ತಾರೆ.
ಮತ್ತೆ ಬೇಡುತ್ತಿದೆ ಕೊಡಗು: 2018ರಲ್ಲಿ ಭೂಕುಸಿತದ ಸಂಕಷ್ಟ ಸಂಭವಿಸಿದಾಗ ರಾಜ್ಯದ ಮೂಲೆ ಮೂಲೆಗಳಿಂದ ಟನ್ ಗಟ್ಟಲೆ ಆಹಾರ ಸಾಮಗ್ರಿ ಪೂರೈಕೆ ಆಗಿತ್ತು. ಈ ಬಾರಿಯೂ ಆಹಾರ ಸಾಮಗ್ರಿ ನೀಡುವಂತೆ ಜಿಲ್ಲಾಡಳಿತ ಕೋರಿದೆ.
‘ಕೊಡಗಿನ ಜನರು ಮತ್ತೆ ಬೇಡುವ ಸ್ಥಿತಿಗೆ ಬಂದಿದ್ದಾರೆ. ಮಳೆ ಗಾಯದ ಮೇಲೆಯೇ ಬರೆ ಎಳೆದು ಬಿಟ್ಟಿತು’ ಎಂದು ನಾಪೋಕ್ಲು ಗ್ರಾಮದ ಸಂತ್ರಸ್ತಮುರಳಿ ಕಣ್ಣೀರಾದರು.
ಸೋಮವಾರಪೇಟೆ ತಾಲ್ಲೂಕಿನ ಹರದೂರು ಹೊಳೆಯಲ್ಲಿ ಮೃತ ಜಾನುವಾರುಗಳೂ, ಮನೆ ಸಾಮಗ್ರಿಗಳೂ ಬರುತ್ತಿವೆ. ಹಲವು ಜಾನುವಾರುಗಳು ಮಾಲೀಕರಿಲ್ಲದೆ ಕಾಡುಮೇಡು ಸೇರಿವೆ.
ಕಾರ್ಯಾಚರಣೆಗೆ ಮಳೆ ಅಡ್ಡಿ
ವಿರಾಜಪೇಟೆಯ ತೋರದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಕಣ್ಮರೆಯಾದ 8 ಮಂದಿಗಾಗಿ ಶನಿವಾರ ನಡೆಸಿದ ಶೋಧ ಯಶಸ್ವಿ ಆಗಲಿಲ್ಲ. ಅಪಾಯಕಾರಿ ಸ್ಥಳದಲ್ಲಿ ಭಾರಿ ಮಳೆ, ಮತ್ತೆ ಭೂಕುಸಿತದಿಂದಕಾರ್ಯಾಚರಣೆಗೆ ಅಡಚಣೆಯಾಗಿದೆ. ರಕ್ಷಣಾ ಸಿಬ್ಬಂದಿ ಮೇಲೆಯೇ ಮಣ್ಣು ಕುಸಿಯುತ್ತಿದೆ. ಈ ಸ್ಥಳದಲ್ಲಿ 300 ಮಂದಿಯನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.