ಪಾವಗಡ: ಕೇವಲ ಒಂದೂವರೆ ವರ್ಷಗಳ ಹಿಂದಿನವರೆಗೆ ಕೆ.ಆರ್.ಗೀತಾಂಜಲಿ ಅವರು ತನ್ನಂತೆಯೇ ಇರುವ ಬೇರೆಲ್ಲ 35 ವರ್ಷಗಳ ಮಹಿಳೆಯರಂತೆ ಸ್ವತಂತ್ರವಾಗಿ ಮನೆ ಕೆಲಸಗಳನ್ನು ನಿಭಾಯಿಸುತ್ತಿದ್ದರು. ಅವರಿವರ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಮೂಲಕ ಅಷ್ಟೋಇಷ್ಟೋ ಸಂಪಾದನೆ ಮಾಡುತ್ತಿದ್ದರು.
ಆದರೆ ಇಂದು ಅವರಿಗೆ ಗೌರವದಿಂದ ಬದುಕಲೂ ಆಗುತ್ತಿಲ್ಲ. ಪ್ರತಿಯೊಂದಕ್ಕೂ ಗಂಡ ಅಥವಾ ಅಕ್ಕನ ಸಹಾಯ ಬೇಕು. ಬಹಿರ್ದೆಶೆಗೆ ಹೋಗಲು, ಸ್ನಾನ ಮಾಡಲೂ ಅವರಿಗೆ ಇನ್ನೊಬ್ಬರ ನೆರವು ಬೇಕು ಎನ್ನುವ ಸ್ಥಿತಿ ಇದೆ. ಬಡತನ ಮತ್ತು ಅನಕ್ಷರತೆ ಆಕೆಯ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ತನ್ನ ಬಾಧಿಸುತ್ತಿರುವ ಕಾಯಿಲೆ ಮತ್ತು ಅದರ ಚಿಕಿತ್ಸೆ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ.
ಗೀತಾಂಜಲಿ ಅವರು ಬದುಕುತ್ತಿರುವ ವಾತಾವರಣವೂ ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕರಿಯಮ್ಮನಪಾಳ್ಯದಲ್ಲಿ ಗೀತಾಂಜಲಿ ಅವರ ಮನೆಯಿದೆ. ನಿಮಗೆ ಗೊತ್ತಿರಬಹುದು, ಪಾವಗಡದಲ್ಲಿ ಇದು ಸತತ 14ನೇ ವರ್ಷದ ಬರ.
ಇಂದು ಪಾವಗಡ ಎನ್ನುವ ಪದವೇ ಬರಗಾಲಕ್ಕೆ ಪರ್ಯಾಯ ಎನ್ನುವಂತಾಗಿದೆ. ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರದ ವಾತಾವರಣದಿಂದ ಕೃಷಿ ಹಾಳಾಗಿದೆ. ಆದರೆ ಪಾವಗಡದಲ್ಲಿ ಮಾತ್ರ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿದೆ.
ಕರಿಯಮ್ಮನಪಾಳ್ಯದಲ್ಲಿರುವ ಹತ್ತಾರು ಮೂಳೆಸವೆತ (ಸ್ಕೆಲಿಟಲ್ ಫ್ಲೂರೊಸಿಸ್ -ಎಸ್‌ಎಫ್) ರೋಗಿಗಳ ಪೈಕಿ ಗೀತಾಂಜಲಿ ಸಹ ಒಬ್ಬರು. ಫ್ಲೋರೈಡ್ ಅಂಶ ಹೆಚ್ಚಾಗಿರುವ ಕುಡಿಯುವ ನೀರು ಬಳಕೆ ಈ ಕಾಯಿಲೆಗೆ ಮುಖ್ಯಕಾರಣ. ಫ್ಲುರೊಸಿಸ್ನಿಂದಾಗಿ ಗೀತಾಂಜಲಿ ಅವರ ಎರಡೂ ಕಾಲಿನ ಮೂಳೆಗಳು ತಿರುಚಿಕೊಂಡಿವೆ, ಅಲ್ಲಲ್ಲಿ ಬಿರುಕುಬಿಟ್ಟಿವೆ ಸಂಪೂರ್ಣ ಹಾಳಾಗಿವೆ. ಸೊಂಟದಿಂದ ಕೆಳಗಿನ ಭಾಗ ಅವರ ಸ್ವಾಧೀನದಲ್ಲಿ ಇಲ್ಲ. ಒಬ್ಬರೇ ಕುಳಿತು ಶೂನ್ಯ ನಿಟ್ಟಿಸುತ್ತಾ ಹಗಲು ಕಳೆಯುತ್ತಾರೆ. ಆದರೆ ರಾತ್ರಿಗಳನ್ನು ಕಳೆಯುವುದು ಅಷ್ಟು ಸುಲಭವಲ್ಲ.
ರಾತ್ರಿಹೊತ್ತು ನೋವು ಸಹಿಸಲಾಗದೆ ಕಿರುಚುತ್ತಿದ್ದಳು. ಕಳೆದ ವರ್ಷ ತುಮಕೂರಿನಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಮೂರೇ ದಿನಗಳಲ್ಲಿ ನಮ್ಮ ದುಡ್ಡು ಖಾಲಿಯಾಗಿತ್ತು. ಹಳ್ಳಿಗೆ ವಾಪಸ್ ಕರೆತಂದೆವು. ಮೊದಮೊದಲು ಕೇವಲ ಅವಳ ಎಡಗಾಲಿಗೆ ಮಾತ್ರ ತೊಂದರೆಯಾಗಿತ್ತು. ಆದರೆ ಈಗ ಬಲಗಾಲಿಗೂ ಹರಡಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗೆ ವಾರಕ್ಕೆ ಮೂರ್ನಾಲ್ಕು ಇಂಜೆಕ್ಷನ್ ಕೊಡಿಸುತ್ತೇನೆ. ಇಂಜೆಕ್ಷನ್ ಕೊಡಿಸಲು ಸಾಧ್ಯವಾಗದಿದ್ದಾಗ ಪ್ಯಾರಸೆಟಮಾಲ್ ಮಾತ್ರೆಗಳನ್ನು ಕೊಟ್ಟುಬಿಡುತ್ತೇನೆ' ಎಂದು ಆಶಾ ಕಾರ್ಯಕರ್ತೆಯೂ ಆಗಿರುವ ಗೀತಾಂಜಲಿಯ ಸೋದರಿ ಪುಟ್ಟರಂಗಮ್ಮ ಪ್ರತಿಕ್ರಿಯಿಸಿದರು.
(ಮೂಳೆ ಸವೆತಕ್ಕೆ ತುತ್ತಾಗಿರುವ ಗೀತಾಂಜಲಿ–ಪ್ರಜಾವಾಣಿ ಚಿತ್ರ/ ಅಶ್ವಿನಿ ವೈ.ಎಸ್)
ಬದುಕಿನುದ್ದಕ್ಕೂ ಗೀತಾಂಜಲಿ ಅವರ ಕುಟುಂಬ ಕೊಳವೆಬಾವಿಯ ನೀರನ್ನೇ ಕುಡಿಯುತ್ತಿತ್ತು. ಕೇವಲ ಎಂಟು ತಿಂಗಳ ಹಿಂದೆ ಅವರ ಹಳ್ಳಿಯಲ್ಲಿ ಡಿಫ್ಲೊರಿಡೇಶನ್ (ಫ್ಲೋರೈಡ್ ಅಂಶ ನಿಯಂತ್ರಿಸುವ) ಘಟಕ ಸ್ಥಾಪಿಸಲಾಯಿತು. ಈಗ 2 ರೂಪಾಯಿ ತೆತ್ತು ಒಂದು ಕೊಡ ಕುಡಿಯುವ ನೀರು ಖರೀದಿಸುತ್ತಿದೆ.
ಆದರೆ ಇದರಿಂದಲೂ ಅವರಿಗೆ ಅಷ್ಟೇನೂ ಲಾಭವಾಗಿಲ್ಲ. ಸ್ಥಳೀಯ ಸಮಾಜ ಸೇವಕ ಓಂಕಾರ್ ಸೇರಿದಂತೆ ಹಲವು ಗ್ರಾಮಸ್ಥರಿಗೆ ಶುದ್ಧೀಕರಣ ಘಟಕದಿಂದ ಸಿಗುವ ನೀರಿನ ಗುಣಮಟ್ಟದ ಬಗ್ಗೆಯೂ ಅನುಮಾನಗಳಿವೆ. 'ಈ ಘಟಕವನ್ನು ಒಂದು ವರ್ಷದ ಹಿಂದೆ ಸ್ಥಾಪಿಸಲಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಘಟಕವನ್ನು ಸರಿಯಾಗಿ ನಿರ್ವಹಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಯಾರೂ ಗಮನಹರಿಸಿಲ್ಲ' ಎನ್ನುತ್ತಾರೆ ಓಂಕಾರ್.
ಹಲ್ಲುಗಳು ಹಾಳಾಗುತ್ತಿವೆ
ಪಾವಗಡ ತಾಲ್ಲೂಕಿನ ಹಳ್ಳಿಗಳಿಗೆ ಕೊಳವೆಬಾವಿಗಳೇ ಕುಡಿಯುವ ನೀರಿನ ಏಕೈಕ ಮೂಲ. 1000ದಿಂದ 1200 ಅಡಿಗಳಷ್ಟು ಆಳದಿಂದ ನೀರು ಎತ್ತಲಾಗುತ್ತಿದೆ. ಇಂಥ ನೀರಿನಲ್ಲಿಯೇ ಫ್ಲೋರೈಡ್ ಅಂಶ ಹೆಚ್ಚು. ನೀರಿನಲ್ಲಿ ಫ್ಲೋರೈಡ್ ಅಂಶ 1.5 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಪಾವಗಡ ಮತ್ತು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ಈ ಪ್ರಮಾಣ 5 ಪಿಪಿಎಂಗೂ ಹೆಚ್ಚು.
ಇದರ ಪರಿಣಾಮ ಎನ್ನವುಂತೆ, ಇಲ್ಲಿನ ಅಂತರ್ಜಲ ಬಳಸಿದವರ ಹಲ್ಲುಗಳ ಮೇಲೆ ಅಳಿಸಲಾಗದ ಗುರುತುಗಳು ಉಳಿಯುತ್ತಿವೆ. ದೊಡ್ಡವರಲ್ಲಿ ಮೂಳೆಯ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರೆ, ಮಕ್ಕಳನ್ನು ದಂತಕ್ಷಯ (ಡೆಂಟಲ್ ಫ್ಲೊರೊಸಿಸ್ -ಡಿಎಫ್) ಬಾಧಿಸುತ್ತಿದೆ. ಎಂಟು ವರ್ಷದ ಸಣ್ಣ ಮಕ್ಕಳೂ ಈ ಕಾಯಿಲೆಯ ಹಿಡಿತಕ್ಕೆ ಸಿಲುಕಿದ್ದಾರೆ.
(ಶಾಲಾ ಮಕ್ಕಳನ್ನು ಬಾಧಿಸುತ್ತಿರುವ ದಂತಕ್ಷಯ–ಪ್ರಜಾವಾಣಿ ಚಿತ್ರ/ ಅಶ್ವಿನಿ ವೈ.ಎಸ್)
'ನಮ್ಮ ಶಾಲೆಯ ಬಹುತೇಕ ವಿದ್ಯಾರ್ಥಿಗಳ ಹಲ್ಲು ಬಣ್ಣಗೆಟ್ಟಿದೆ' ಎನ್ನುತ್ತಾರೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿ. 'ಹಾಲುಹಲ್ಲು ಉದುರಿದ ನಂತರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ನನ್ನ ಕೆಲ ವಿದ್ಯಾರ್ಥಿಗಳ ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿದೆ. ಇನ್ನೂ ಕೆಲವರು ಮೂಳೆ ಸವೆತದಿಂದ ಬಳಲುತ್ತಿದ್ದಾರೆ. ತಾಲ್ಲೂಕಿನ ಹಳ್ಳಿಗಳಲ್ಲಿ ಗರ್ಭಪಾತವೂ ಸಾಮಾನ್ಯ ವಿದ್ಯಮಾನ ಎನಿಸಿದೆ. ಶಾಲೆ ಮತ್ತು ಕಾಲೇಜುಗಳಿಗೆ ಶುದ್ಧೀಕರಿಸಿದ ನೀರಿನ್ನೇ ಕಡ್ಡಾಯವಾಗಿ ಪೂರೈಸಬೇಕು ಎಂದು ಸರ್ಕಾರ ಈಚೆಗೆ ನಿಯಮ ಮಾಡಿದೆ. ಆದರೆ ಮನೆಗೆ ಹೋದ ನಂತರ ಮಕ್ಕಳು ಕೊಳವೆಬಾವಿಗಳ ನೀರನ್ನೇ ಕುಡಿಯಬೇಕಲ್ಲವೇ? ಕೆಲ ಕುಟುಂಬಗಳು ಒಂದು ಕೊಡ ನೀರಿಗಾಗಿ 2 ರೂಪಾಯಿ ತೆರುವ ಸ್ಥಿತಿಯಲ್ಲಿಯೂ ಇಲ್ಲ' ಎನ್ನುತ್ತಾರೆ ಅವರು.
ಶುದ್ಧನೀರಿಗಾಗಿ ಆಂದೋಲನ
ರೈತರ ಚಳವಳಿ ವ್ಯಾಪಕವಾಗಿ ನಡೆದ ನಂತರ ತಾಲ್ಲೂಕಿಗೆ ಒಳ್ಳೆಯದಾಗಬಹುದು ಎನ್ನುವ ನಿರೀಕ್ಷೆಗಳು ಗರಿಗೆದರಿದವು. 2011ರಲ್ಲಿ 29 ರೈತರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತುರ್ತಾಗಿ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ರಾಜ್ಯವ್ಯಾಪಿ ಶುದ್ಧ ಕುಡಿಯುವ ನೀರು ಘಟಕಗಳ (ರಿವರ್ಸ್ ಒಸ್ಮಾಸಿಸ್ ಪ್ಲಾಂಟ್- ಆರ್‌ಒ) ಸ್ಥಾಪನೆಗೆ ಇದು ಮುಖ್ಯ ಕಾರಣವಾಯಿತು.
ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರು ಯೋಜನೆ ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಇವೇ ಸಂಘಟನೆಗಳು ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದವು. ಇದಾದ ನಂತರ ಸಿದ್ದರಾಮಯ್ಯ ಸರ್ಕಾರ ತುಂಗಭದ್ರಾ ಅಣೆಕಟ್ಟೆಯ ಹಿನ್ನೀರಿನಿಂದ ತಾಲ್ಲೂಕಿಗೆ ನೀರು ಒದಗಿಸಲು 2352 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಘೋಷಿಸಿತು.
ಈ ಯೋಜನೆ ಇನ್ನೂ ಜಾರಿಯಾಗಿಲ್ಲ. ಆದರೆ ತಾಲ್ಲೂಕಿನಲ್ಲಿ ಸ್ಥಾಪಿಸಿರುವ ನೀರು ಶುದ್ಧೀಕರಣ ಘಟಕಗಳ ನಿರ್ವಹಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ವರದಿಯಾಗಿದೆ.
ಕಳಪೆ ಗುಣಮಟ್ಟದ ಶುದ್ಧೀಕರಣ ಘಟಕಗಳು
2013ರಲ್ಲಿ ಪಾವಗಡ ತಾಲ್ಲೂಕಿನಲ್ಲಿ ಒಟ್ಟು 245 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಯಗಿತ್ತು. ಈ ಪೈಕಿ 16 ಈಗ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ಸ್ಥಳೀಯರು ಹೇಳುವ ಪ್ರಕಾರ ಈ ಪೈಕಿ ಬಹುತೇಕ ಘಟಕಗಳಿಗೆ ಬೀಗ ಹಾಕಲಾಗಿದೆ.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಘಟಕಗಳನ್ನು ಸ್ಥಾಪಿಸಲು ಟೆಂಡರ್ ನಲ್ಲಿ ಅವಕಾಶ ಪಡೆದುಕೊಂಡ ಎರಡು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದ್ದಾರೆ. “ಈ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಜ್ಞಾಪನಾ ಪತ್ರ ಕಳಿಸಿದ್ದೇವೆ. ಘಟಕಗಳನ್ನು ಸರಿಯಾಗಿ ನಿರ್ವಹಿಸದ ಸ್ಮಾರ್ಟ್ ಇಂಡಿಯಾ ಮತ್ತು ಪ್ಯಾನ್ ಏಷ್ಯಾ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಚಿಂತನೆ ನಡೆಸಿದ್ದೇವೆ” ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಗಂಭೀರ ಪರಿಸ್ಥಿತಿ
ಫ್ಲುರೊಸಿಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ರಾಷ್ಟ್ರೀಯ ಕಾರ್ಯಕ್ರಮ (National Programme for Prevention and Control of Fluorosis -NPPCF) 2008-09ರಿಂದ ಆರಂಭವಾಯಿತು. ಆದರೆ ರಾಜ್ಯದಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿ ಕೇವಲ ಒಂದು ವರ್ಷವಾಗಿದೆ ಅಷ್ಟೇ.
ತುಮಕೂರು ಜಿಲ್ಲೆಯ ಹಳ್ಳಿಗಳಲ್ಲಿ ಆರೋಗ್ಯ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎನ್ನುವುದನ್ನು ಸಾಬೀತುಪಡಿಸಲು ಇದೀಗ ಅಂಕಿಅಂಶಗಳು ಲಭ್ಯ.
ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 695 ಮೂಳೆ ಸವೆತದ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 245 ಪ್ರಕರಣಗಳು ಪಾವಗಡ ತಾಲ್ಲೂಕಿನಲ್ಲಿ ವರದಿಯಾಗಿವೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 315 ದಂತಕ್ಷಯ (ಡಿಎಫ್) ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 136 ಪ್ರಕರಣಗಳು ಪಾವಗಡ ತಾಲ್ಲೂಕಿನಲ್ಲಿಯೇ ಇವೆ.
ನವೆಂಬರ್ 2017ರಿಂದ ಫೆಬ್ರುವರಿ 2018ರ ನಡುವೆ ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ನಡೆದ ತಪಾಸಣಾ ಶಿಬಿರಗಳಲ್ಲಿ ವರದಿಯಾದ ಪ್ರಕರಣಗಳ ಅಂಕಿಅಂಶ ಇದು.
ಮೂಳೆಸವೆತದಿಂದ ಬಳಲುತ್ತಿರುವವರಿಗೆ ಗಾಲಿಕುರ್ಚಿ, ವಾಕರ್, ವಾಕಿಂಗ್ ಸ್ಟಿಕ್ ಮತ್ತು ಟ್ರೈಸಿಕಲ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯ ಹಲವೆಡೆ ಮೂಳೆ ಸವೆತದಿಂದ ಸಾವುಗಳು ಸಂಭವಿಸಿವೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ವೈದ್ಯರು ಮಾತ್ರ ಮೂಳೆಸವೆತ ಪ್ರಾಣಾಂತಿಕ ಅಲ್ಲ, ಆದರೆ ಪೂರ್ಣ ಗುಣಪಡಿಸಲು ಆಗುವುದಿಲ್ಲ ಎನ್ನುತ್ತಾರೆ.
ಜಿಲ್ಲೆಯಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಕೊಳವೆಬಾವಿ ನೀರಿನ ಬಳಕೆಯನ್ನು ಕೈಬಿಟ್ಟು, ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಎಲ್ಲದರ ನಡುವೆಯೂ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ಪಾವಗಡದಲ್ಲಿ ಪ್ರಬಲವಾಗಿದೆ. ನೀರಿನ ಟ್ಯಾಂಕರ್ ಗಳು ತಂಡೋಪತಂಡವಾಗಿ ಸಂಚರಿಸುವ ದೃಶ್ಯ ಪಾವಗಡದಲ್ಲಿ ಸಾಮಾನ್ಯ.
ಅಂಕಿ ಅಂಶ
ಮೂಳೆ ಸವೆತದಫ್ಲುರೊಸಿಸ್ ಪ್ರಕರಣಗಳ ಸಂಖ್ಯೆ (ತುಮಕೂರು) : 695
ದಂತಕ್ಷಯ ಫ್ಲುರೊಸಿಸ್ ಪ್ರಕರಣಗಳ ಸಂಖ್ಯೆ(ತುಮಕೂರು): 315
ಎನ್‌ಪಿಪಿಸಿಎಫ್ ತಪಾಸಣೆಗೆ ಒಳಾಗದವರು (ತುಮಕೂರು): 1433
ತಪಾಸಣೆಗಾಗಿ ಮೂತ್ರ ಸಂಗ್ರಹಿಸಿರುವವರ ಸಂಖ್ಯೆ: 719
ಎಕ್ಸ್–ರೇ ಪರೀಕ್ಷೆಗೆ ಸೂಚಿಸಿರುವಪ್ರಕರಣಗಳ ಸಂಖ್ಯೆ: 209
ಎಸ್‌ಎಫ್ ಮತ್ತು ಡಿಎಫ್ ಒಟ್ಟು ಪ್ರಕರಣಗಳ ಸಂಖ್ಯೆ: 244
ಫಿಸಿಯೋಥೆರಫಿ ಸೂಚಿಸಿರುವ ಪ್ರಕರಣಗಳಸಂಖ್ಯೆ: 48
ಪ್ಲೋರೈಡ್ ನೀರು ಸಂಸ್ಕರಣ ಘಟಕಗಳ ಸಂಖ್ಯೆ (ಪಾವಗಡ): 45
ಪರಿಕರಗಳವಿತರಣೆ(ಗುಬ್ಬಿ, ಕೊರಟಗೆರೆ, ಮದುಗಿರಿ, ಸಿರಾ, ಪಾವಗಡ, ಚಿಕ್ಕನಾಯಕನಹಳ್ಳಿ)
ಗಾಲಿಕುರ್ಚಿ ಸಂಖ್ಯೆ: 10
ಉರುಗೋಲು: 82
ಮೂರು ಚಕ್ರದ ಸೈಕಲ್: 3
(ಮೂಲ: ಡೆಕ್ಕನ್ ಹೆರಾಲ್ಡ್, Flurosis takes its toll on drought hit Pavagada, 4/12/2018. ಅನುವಾದ- ಡಿ.ಎಂ.ಘನಶ್ಯಾಮ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.