ADVERTISEMENT

ಆಹಾರ: ದೂರೇ ಲಂಚದ ಮೂಲ- ಸಹಾಯವಾಣಿಗಳಲ್ಲಿ ಅಕ್ರಮ

ಸಹಾಯವಾಣಿಗಳಲ್ಲಿ ಅಕ್ರಮ l ಕರೆಗಳು ಲಕ್ಷ, ದಾಖಲು ಪ್ರಕರಣ ನೂರಕ್ಕೂ ಕಡಿಮೆ

ಚಂದ್ರಹಾಸ ಹಿರೇಮಳಲಿ
Published 19 ಸೆಪ್ಟೆಂಬರ್ 2022, 20:58 IST
Last Updated 19 ಸೆಪ್ಟೆಂಬರ್ 2022, 20:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಡಿತರ ವಿತರಣೆಯಲ್ಲಿನ ಅಕ್ರಮ, ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ತಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿದ್ದ ‘ಸಹಾಯವಾಣಿ’ಗಳೇ ಲಂಚಕ್ಕೆ ದಾರಿ ಮಾಡಿಕೊಟ್ಟಿವೆ.

ಇಲಾಖೆಯ ಸಹಾಯವಾಣಿಗೆ ಕರೆ ಮಾಡುವ ಸಾರ್ವಜನಿಕರು ಹೇಳುವ ಪಡಿತರ ವಿತರಣೆಯ ಸಮಸ್ಯೆ, ಲೋಪಗಳು, ಹಗರಣಗಳ ಸ್ವರೂಪದ ಮಾಹಿತಿ ಪಡೆಯುವ ಸಿಬ್ಬಂದಿಯು, ಲೋಪ ಎಸಗಿದ ನ್ಯಾಯಬೆಲೆ ಅಂಗಡಿಗಳು, ಅದರ ಮಾಲೀಕರು, ಗೋದಾಮುಗಳ ಅಧಿಕಾರಿ, ಸಿಬ್ಬಂದಿಯ ವಿವರ, ಮೊಬೈಲ್‌ ಸಂಖ್ಯೆಯ ವಿವರ ಪಡೆದುಕೊಳ್ಳುತ್ತಾರೆ. ದೂರುದಾರರ ಜತೆಗಿನ ಸಂಪರ್ಕ ಕಡಿತಗೊಂಡ ನಂತರ ವ್ಯವಹಾರಕ್ಕೆ ಇಳಿಯುತ್ತಾರೆ ಎಂಬ ದೂರು ವ್ಯಾಪಕವಾಗಿದೆ.

ಸಹಾಯವಾಣಿಗೆ ಬಂದ ದೂರು ದಾಖಲಿಸಿಕೊಳ್ಳದೆ ನೇರವಾಗಿ ಆರೋಪಿತರಿಗೆ ಕರೆ ಮಾಡುತ್ತಾರೆ.

ADVERTISEMENT

ಹಲೋ ನಾನು ಪಡಿತರ ಸಹಾಯವಾಣಿ...

ಪಡಿತರ ಅಕ್ರಮ ತಡೆಗೆ ಇರುವ ಸಹಾಯವಾಣಿ ಕರೆಗಳ ಹಲವು ಆಡಿಯೊ ಧ್ವನಿ ಮುದ್ರಿಕೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ, ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕಲಬುರಗಿ ಜಿಲ್ಲೆಯ ಜೇವರ್ಗಿ ಸೇರಿದಂತೆ ಹಲವು ಭಾಗಗಳಿಂದ ಬಂದ ದೂರು ಕರೆಗಳ ಮಾಹಿತಿ ಬಳಸಿಕೊಂಡು ಹಣ ಪಡೆದಿರುವ ಮಾಹಿತಿ ಈ ಆಡಿಯೊಗಳಲ್ಲಿವೆ.

ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ‘ಸಹಾಯವಾಣಿ’ ಸಿಬ್ಬಂದಿ ಸಂಭಾಷಣೆ ಹೀಗಿದೆ.

ಸಹಾಯವಾಣಿ: ಹಲೋ ನೀವು ಮೈಸೂರಿನ ನ್ಯಾಯಬೆಲೆ ಅಂಗಡಿ ಮಾಲೀಕರಾ?.

ಮಾಲೀಕ: ಹೌದು. ನೀವು ಯಾರು?

ಸಹಾಯವಾಣಿ: ನಾವು ಆಯುಕ್ತರ ಕಚೇರಿಯ ಸಹಾಯವಾಣಿ ಸಿಬ್ಬಂದಿ.

ಮಾಲೀಕ: ಹೇಳಿ ಸಾರ್ ಏನು ವಿಷಯ?

ಸಹಾಯವಾಣಿ: ನಿಮ್ಮ ಬಗ್ಗೆ ಒಬ್ಬರು ದೂರು ನೀಡಿದ್ದಾರೆ. ನೀವು ತಿಂಗಳಲ್ಲಿ ಪಡಿತರ ಬಂದ ಐದು ದಿನ ಮಾತ್ರ ಅಂಗಡಿ ತೆರೆಯುತ್ತೀರಂತೆ.

ಮಾಲೀಕ: ಇಲ್ಲ ಸಾರ್, ಎಲ್ಲ ದಿನವೂ ತೆರೆದಿರುತ್ತದೆ.

ಸಹಾಯವಾಣಿ: ಸುಳ್ಳು ಹೇಳಬೇಡಿ. ನಮ್ಮ ಬಳಿ ಎಲ್ಲ ದಾಖಲೆ ಇವೆ. ದೂರು ದಾಖಲಾದರೆ ನಿಮ್ಮ ಪರವಾನಗಿ ರದ್ದಾಗುತ್ತದೆ. ಸುಮ್ಮನೆ ಆಯುಕ್ತರ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ.

ಮಾಲೀಕ: ಹಾಗೆಲ್ಲ ಮಾಡಬೇಡಿ ಸಾರ್. 30 ವರ್ಷ ನಿಷ್ಠೆಯಿಂದ ದುಡಿದಿದ್ದೇವೆ. ಯಾರದೋ ಮಾತು ಕೇಳಿ ಅನ್ಯಾಯ ಮಾಡಬೇಡಿ.

ಸಹಾಯವಾಣಿ: ದೂರು ಬೇಡ ಎಂದರೆ ನಿಮಗೆ ಸ್ವಲ್ಪ ಹೊರೆ ಆಗುತ್ತದೆ.

ಮಾಲೀಕ: ಹೇಳಿ ಸಾರ್ ಏನು ಮಾಡಬೇಕು.

ಸಹಾಯವಾಣಿ: ₹ 50 ಸಾವಿರ ಕೊಡಿ ಸಾಕು.

ಮಾಲೀಕ: ಸಾರ್, ಅಷ್ಟೊಂದು ಆಗಲ್ಲ.

ಸಹಾಯವಾಣಿ: ಎಷ್ಟು ಕೊಡ್ತೀರ ಬೇಗ ಹೇಳಿ.

ಮಾಲೀಕ: ₹ 10 ಸಾವಿರ ಅಷ್ಟೇ ಸಾ.

ನಾಲ್ವರು ಸಿಬ್ಬಂದಿ ಭಾಗಿ ಶಂಕೆ

ಲಂಚದ ಕುರಿತು ಪ್ರತಿಕ್ರಿಯೆ ಪಡೆಯಲು ಇಲಾಖೆ ಆಯುಕ್ತರಿಗೆ ಕರೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆಯು ಆಂತರಿಕ ವಿಚಾರಣೆ ಆರಂಭಿಸಿದೆ.

‘ವಿಷಯ ತಿಳಿಯುತ್ತಿದ್ದಂತೆ ತ್ವರಿತ ವಿಚಾರಣೆ ಮಾಡಿದ್ದೇವೆ. ಮೂರರಿಂದ ನಾಲ್ಕು ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ಇನ್ನಷ್ಟು ತನಿಖೆಯ ನಂತರ ಲಂಚ ಪಡೆದವರನ್ನು ವಜಾ ಮಾಡಲಾ
ಗುವುದು. ಹಿಂದೆಯೂ ಇಂತಹ ಪ್ರಕರಣಗಳು ನಡೆದಿರುವ ಮಾಹಿತಿ ಇಲ್ಲ. ಸಮಗ್ರ ತನಿಖೆ ನಡೆಸಿ, ಮಾಹಿತಿ ನೀಡುವಂತೆ ಪಡಿತರ ಪೂರೈಕೆಯ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಆಹಾರ ಇಲಾಖೆ ಆಯುಕ್ತೆಎಂ.ಕನಗವಲ್ಲಿ ಮಾಹಿತಿ ನೀಡಿದರು. ಸಹಾಯವಾಣಿಗೆ ಬರುವ ಎಲ್ಲ ಕರೆಗಳು ದೂರುಗಳೇ ಆಗಿರುವುದಿಲ್ಲ. ಪಡಿತರ ಮಾಹಿತಿ ಕೇಳಲುಹೆಚ್ಚಿನ ಜನರು ಕರೆ ಮಾಡುತ್ತಾರೆ. ಹಾಗಾಗಿ, ಕಡಿಮೆ ದೂರು ದಾಖಲಾಗಿರಬಹುದು ಎಂದು ಆಯುಕ್ತರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.