ADVERTISEMENT

ಕೊಡಗಿನಲ್ಲಿ ಮಾರಾಟವಾಗುತ್ತಿದ್ದ ಕೇರಳದ ತಿನಿಸುಗಳಲ್ಲಿ ಕೃತಕ ಬಣ್ಣ ಪತ್ತೆ

ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಪತ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 15:42 IST
Last Updated 8 ನವೆಂಬರ್ 2024, 15:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೇರಳ ರಾಜ್ಯದಲ್ಲಿ ತಯಾರಿಸಲ್ಪಟ್ಟು ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ತಿನಿಸುಗಳ 31 ಮಾದರಿಗಳಲ್ಲಿ ಕೃತಕ ಬಣ್ಣಗಳನ್ನು ಬಳಸಿದ್ದ ಕಾರಣ ತಯಾರಕರ ಮೇಲೆ ಕ್ರಮಕೈಗೊಳ್ಳುವಂತೆ ಕೇರಳಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

ಖಾರಾ ಮಿಕ್ಸರ್‌, ಚಿಪ್ಸ್‌, ಹಲ್ವಾ, ಮುರುಕು, ಒಣ ಹಣ್ಣುಗಳು ಮತ್ತು ಸಿಹಿ ತಿಂಡಿಗಳಲ್ಲಿ ಅಲುರಾ ರೆಡ್, ಕಾರ್ಮೊಸೈನ್‌, ಟಾರ್ಟಜೈನ್, ಸನ್‌ಸೆಟ್‌ ಯೆಲ್ಲೊದಂತಹ ಕೃತಕ ಬಣ್ಣ ಬಳಸಲಾಗಿದೆ. 90 ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿತ್ತು. 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಲಾಗಿತ್ತು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೇ ಇರುವುದು, ತಯಾರಿಕಾ ದಿನಾಂಕವನ್ನು ಮುಂಚಿತವಾಗಿ ನಮೂದು ಮಾಡದೇ ಇರುವುದು, ಎಫ್‌ಎಸ್‌ಎಸ್‌ಎಐ ನೋಂದಣಿ/ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲದಿರುವುದು ತಪಾಸಣೆ ವೇಳೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಹಿ ತಿಂಡಿ ಮಾರಾಟವಾಗುವ ಕಾರಣ 151 ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಲಾಗಿದೆ. 143 ಮಾದರಿಗಳು ಸುರಕ್ಷಿತ ಎಂದು 9 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡು ಬಂದಿದ್ದು, ಅಸುರಕ್ಷಿತ ಎಂದು ವರದಿಯಾಗಿದೆ ಎಂದು ಹೇಳಿದ್ದಾರೆ.

ಹೊರ ರಾಜ್ಯಗಳಲ್ಲಿ ಗೋಲ್‌ ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಹಾರ್ಪಿಕ್‌ ಮತ್ತು ಯೂರಿಯಾ ಗೊಬ್ಬರ ಬಳಸುತ್ತಿರುವ ಮತ್ತು ಗೋಲ್ ಗಪ್ಪಾ ಹಿಟ್ಟನ್ನು ಕಾಲಿನಲ್ಲಿ ತುಳಿದು ತಯಾರಿಸುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದ್ದು, ಈ ಸಂಬಂಧ ರಾಜ್ಯದಾದ್ಯಂತ ಗೋಲ್‌ ಗಪ್ಪಾ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ ಕೊನೆಯ ವಾರದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ 1201 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 65 ಆಹಾರ ಮಾದರಿಗಳ ವಿಶ್ಲೇಷಣಾ ಕಾರ್ಯವು ಮುಗಿದಿದೆ. 65 ಮಾದರಿಗಳೂ ಸುರಕ್ಷಿತ ಎಂಬ ವರದಿ ಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.