ಬೆಂಗಳೂರು: ‘ರಾಜ್ಯದಲ್ಲಿ ಪತಂಜಲಿ ಸೇರಿದಂತೆ ತುಪ್ಪದ 230 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನ ಅಂಶ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಮಿಸಿರುವ ‘ಮ್ಯಾಜಿಕ್ ಬಾಕ್ಸ್’ ಆಹಾರ ಪರೀಕ್ಷಾ ಕೇಂದ್ರಕ್ಕೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ತಿರುಪತಿ ಲಾಡು ಪ್ರಕರಣದಿಂದಾಗಿ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ತಲೆದೋರಿದ್ದವು. ಮಾರುಕಟ್ಟೆಯಲ್ಲಿ ಸಿಗುವ ತುಪ್ಪಕ್ಕೆ ದನದ ಮಾಂಸದ ಕೊಬ್ಬಿನ ಅಂಶ ಬಳಸಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಆದ್ದರಿಂದ ರಾಜ್ಯದಲ್ಲಿ ಪತಂಜಲಿ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ 230 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವುಗಳಲ್ಲಿ 224 ಮಾದರಿಗಳು ಸೇವನೆಗೆ ಸುರಕ್ಷಿತ ಎನ್ನುವುದು ದೃಢಪಟ್ಟಿದೆ. ಐದು ಮಾದರಿಗಳು ಅಸುರಕ್ಷಿತವಾಗಿದ್ದು, ಒಂದು ಮಾದರಿ ಮಾತ್ರ ಕಳಪೆ ಗುಣಮಟ್ಟದ್ದಾಗಿದೆ’ ಎಂದರು.
‘ರಾಜ್ಯದಾದ್ಯಂತ ರೈಲು ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳಲ್ಲಿನ ಆಹಾರ ಗುಣಮಟ್ಟ ಪರಿಶೀಲನೆಗಾಗಿ ಸೆಪ್ಟೆಂಬರ್‌ನಲ್ಲಿ ವಿಶೇಷ ಅಭಿಯಾನ ನಡೆಸಲಾಗಿತ್ತು. 142 ಆಹಾರ ಮಳಿಗೆಗಳಲ್ಲಿ ತಪಾಸಣೆ ಮಾಡಲಾಗಿದ್ದು, ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಥಾಪಿಸಿರುವ 35 ಹೋಟೆಲ್ ಘಟಕಗಳಿಗೆ ಸರಬರಾಜಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ಕುರಿ, ಮೇಕೆ ಮಾಂಸದ 184 ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ 179 ಮಾದರಿಗಳು ಸುರಕ್ಷಿತ, ಐದು ಮಾದರಿಗಳು ಕಳಪೆ ಎನ್ನುವುದು ದೃಢಪಟ್ಟಿದೆ. ಮೊಟ್ಟೆಯ 81 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 80 ಮಾದರಿಗಳು ಸುರಕ್ಷಿತ, ಒಂದು ಮಾದರಿ ಕಳಪೆ ಎನ್ನುವುದು ಖಚಿತಪಟ್ಟಿದೆ. ಕೋಳಿ ಮಾಂಸದ 246 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ 236 ಮಾದರಿಗಳು ಸುರಕ್ಷಿತವೆಂದು, 10 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.