ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಪ್ರತಿದಿನ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಒಂದು ಕೋಟಿ ಲೀಟರ್‌ಗೆ ತಲುಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ, 'ಈ ಶ್ರೇಯ ನಾಡಿನ ಪ್ರತಿಯೊಬ್ಬ ಶ್ರಮಜೀವಿ ಹೈನುಗಾರನಿಗೂ ಸಲ್ಲಬೇಕು' ಎಂದು ಅಭಿನಂದಿಸಿದ್ದಾರೆ.
ಕೆಎಂಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ ಒಂದು ಕೋಟಿ ಲೀಟರ್ ದಾಟಿದೆ. ರಾಜ್ಯ ಸರ್ಕಾರ ಹೈನುಗಾರಿಕೆಯ ರೈತರಿಗೆ ನೀಡಿದ ಪ್ರೋತ್ಸಾಹವೇ ಇದಕ್ಕೆ ಕಾರಣ. ರೈತರ ಬದುಕಿಗೆ ಆರ್ಥಿಕ ಚೈತನ್ಯ ತುಂಬುವುದೇ ಸರ್ಕಾರದ ಆದ್ಯತೆ ಎಂದು ಹೇಳಿದ್ದಾರೆ.
'ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ ₹3 ಹೆಚ್ಚಳ ನೀಡುತ್ತಿರುವುದು, ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವುದು, ಈ ಎಲ್ಲಾ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್‌ಗೆ ತಲುಪಿದೆ' ಎಂದು ಹೇಳಿದ್ದಾರೆ.
'ಯಾವ ಕೆಎಂಎಫ್ ಸಂಸ್ಥೆಯನ್ನು ಹಿಂದಿನ ಬಿಜೆಪಿ ಸರ್ಕಾರ ನಷ್ಟದ ಹಾದಿಗೆ ತಳ್ಳಿ ಗುಜರಾತ್‌ನ ಅಮೂಲ್ ಜೊತೆ ವಿಲೀನ ಮಾಡುವ ಕುತಂತ್ರ ನಡೆಸಿತ್ತೋ, ಕನ್ನಡಿಗ ರೈತರು ದಶಕಗಳ ಕಾಲ ಶ್ರಮದಿಂದ ಕಟ್ಟಿದ ಸಂಸ್ಥೆಯನ್ನು ಯಾರದೋ ಮರ್ಜಿಗೆ ಒಳಗಾಗಿ ವಿಲೀನದ ಹೆಸರಲ್ಲಿ ಮುಳುಗಿಸಲು ಹೊರಟಿತ್ತೋ, ಅದೇ ಕೆಎಂಎಫ್ ಇಂದು ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ, ಇತಿಹಾಸದಲ್ಲೇ ಹೊಸದೊಂದು ದಾಖಲೆ ಬರೆದಿದೆ' ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.