ಕಾರಟಗಿ (ಕೊಪ್ಪಳ ಜಿಲ್ಲೆ): ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ.
ವಿವಿಧ ಆಮಿಷ ತೋರಿಸಿ ಮತಾಂತರಕ್ಕೆ ಒತ್ತಾಯಿಸುತ್ತಿದ್ದರು ಎನ್ನುವ ಆರೋಪದ ಮೇಲೆ ಶುಕ್ರವಾರ ಪಟ್ಟಣದ ರಾಮನಗರದ ಗ್ರೇಸ್ ಪ್ರಾರ್ಥನಾ ಮಂದಿರ ಪಾದ್ರಿ ಸತ್ಯನಾರಾಯಣ, ಅವರ ಪತ್ನಿ ಶಿವಮ್ಮ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪಾದ್ರಿ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಸಿದ್ರಾಮಯ್ಯ ಬಿ.ಎಂ. ತಿಳಿಸಿದರು.
ಅಲೆಮಾರಿ ಬುಡ್ಗ ಜಂಗಮ ಸಮಾಜದ ಶಂಕರ ಎನ್ನುವವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ, ‘ತಮ್ಮ ಕುಟುಂಬದ ಸದಸ್ಯರಿಗೆ ಹಣದ ಆಸೆ ತೋರಿಸಿ ಮತಾಂತರ ಮಾಡಲಾಗಿದೆ. ಪಾದ್ರಿ ಸತ್ಯನಾರಾಯಣ ಬಲವಂತವಾಗಿ ನನಗೆ ದೀಕ್ಷೆ, ಸ್ನಾನದ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ಇಂದಿನಿಂದ ನೀವು, ನಿಮ್ಮ ಕುಟುಂಬದ ಸದಸ್ಯರು ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂದು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸಿದರು. ನೀವು ಯಾವುದೇ ಹಿಂದು ಧರ್ಮದ ದೇವರನ್ನು ಪೂಜೆ ಮಾಡುವಂತಿಲ್ಲ ಎಂದು ಮನೆಯಲ್ಲಿದ್ದ ದೇವರ ಪೋಟೊಗಳನ್ನು ಕಾಲುವೆಯಲ್ಲಿ ಎಸೆದರು. ಹಿಂದೂ ದೇವರ ಪೂಜೆ ಮಾಡಿದರೆ ಕೊಲೆ, ಅತ್ಯಾಚಾರದ ಬೆದರಿಕೆ ಹಾಕಿದ ಪಾದ್ರಿಯ ಕಾರ್ಯದಿಂದ ನಾವೆಲ್ಲಾ ತೊಂದರೆ ಅನುಭವಿಸುತ್ತಿದ್ದೇವೆ. ಮನೆಯ ಸದಸ್ಯರನ್ನು ಚರ್ಚ್‌ನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.