ಕಳಸ: ಇಲ್ಲಿಗೆ ಸಮೀಪದ ಸಂಸೆಯ ಬಸರೀಕಲ್ಲು ಪ್ರದೇಶದ ಅರಣ್ಯ ತಪಾಸಣಾ ಠಾಣೆಯನ್ನು ಭಾನುವಾರ ನಸುಕಿನ ವೇಳೆ ಪೆಟ್ರೋಲ್ ಬಳಸಿ ಸುಡುವ ಯತ್ನ ನಡೆದಿದೆ.
3 ಗಂಟೆ ವೇಳೆಗೆ ತಪಾಸಣಾ ಠಾಣೆಯ ಕಿಟಿಕಿಯ ಬಳಿ ಬೆಂಕಿ ಉರಿಯುತ್ತಿದ್ದು ಕಂಡು ಅಲ್ಲಿ ಮಲಗಿದ್ದ ಇಬ್ಬರು ಸಿಬ್ಬಂದಿ ಗಾಬರಿಗೊಂಡರು. ಬೆಂಕಿ ನಂದಿದ ನಂತರ ಸ್ಥಳದಲ್ಲಿ 3 ಒಡೆದ ವಿಸ್ಕಿ ಬಾಟಲುಗಳು ಮತ್ತು ಅದರ ಒಳಗೆ ಇರಿಸಲಾಗಿದ್ದ ಬಟ್ಟೆಯ ಬತ್ತಿ ಕಾಣುತ್ತಿತ್ತು. ಪ್ರತಿದಿನ ವಾಹನಗಳ ತಪಾಸಣೆ ನಡೆಸಿದ ನಂತರ ಮಾಹಿತಿ ದಾಖಲು ಮಾಡಿಕೊಳ್ಳುವ ರಿಜಿಸ್ಟರ್ ಸ್ವಲ್ಪ ಮಟ್ಟಿಗೆ ಬೆಂಕಿಯಿಂದ ಹಾನಿಯಾಗಿದೆ.
ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಕೊಪ್ಪ ಡಿವೈಎಸ್‍ಪಿ ರಮೇಶ್ ಜಹಗೀರದಾರ್, ಕುದುರೆಮುಖ ಸರ್ಕಲ್ ಇನ್‌ಸ್ಪೆಕ್ಟರ್ ರಾಮಚಂದ್ರ ಭೇಟಿ ನೀಡಿ ಪರಿಶೀಲಿಸಿದರು.
‘ಇದು ನಕ್ಸಲ್ ಚಳವಳಿಗೆ ಸಂಬಂಧಿಸಿದ ದಾಳಿ ಅಲ್ಲ. ಸ್ಥಳೀಯರೇ ಅರಣ್ಯ ಸಿಬ್ಬಂದಿ ಮೇಲಿನ ಸಿಟ್ಟು ಅಥವಾ ದ್ವೇಷದಿಂದ ಮಾಡಿದ ಕೃತ್ಯ’ ಎಂದು ಪೊಲೀಸರು ಅಭಿಪ್ರಾಯಪಟ್ಟರು.
ತಪಾಸಣಾ ಠಾಣೆಯ ಹಿಂಭಾಗದಲ್ಲಿ ಎತ್ತರದ ದಿಬ್ಬ ಇದ್ದು ಅದರ ಮೇಲಿನಿಂದ ಪೆಟ್ರೋಲ್ ತುಂಬಿದ 3 ಬಾಟಲಿಗಳನ್ನು ಎಸೆದಿರುವುದು ಸ್ಪಷ್ಟವಾಗಿದೆ. ಕಳಸ ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.