ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ವಲಯದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಕಟ್ಟಡ ಕಟ್ಟುತ್ತಿರುವ ಚಿತ್ರನಟ ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ತಕ್ಷಣವೇ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿ ಗ್ರಾಮದ ಸರ್ವೆ ನಂಬರ್ 105ರಲ್ಲಿ ಗಣೇಶ್ ಅವರು 1 ಎಕರೆ 24 ಗುಂಟೆ ಜಮೀನು ಹೊಂದಿದ್ದಾರೆ. ಮನೆ ಹಾಗೂ ತೋಟಗಾರಿಕೆ ಉದ್ದೇಶಕ್ಕೆ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಬಂಡೀಪುರ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮತಿ ಪಡೆದಿದ್ದರು. ಆದರೆ, ಅವರು ಬೃಹತ್ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದರು. ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ಜಮೀನಿನಲ್ಲಿ ನಿರ್ಮಾಣ ಮಾಡಲಾಗಿತ್ತು.
‘ಪರಿಸರ ಸೂಕ್ಷ್ಮ ವಲಯದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ. ಗಣೇಶ್ ನಿರ್ಮಿಸುತ್ತಿರುವುದು ಶಾಶ್ವತ ಕಟ್ಟಡ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅರಣ್ಯ ಇಲಾಖೆ ಇದಕ್ಕೆ ಅವಕಾಶ ನೀಡಬಾರದು’ ಎಂದು ಪರಿಸರವಾದಿಗಳು ಆಗ್ರಹಿಸಿದ್ದರು.
ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಬಂಡೀಪುರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಸಂಬಂಧ, ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಅವರು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್ ಅವರಿಗೆ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ನಿರ್ದೇಶಕರು ಗಣೇಶ್ ಅವರಿಗೆ ಇದೇ 14ರಂದು ರಮೇಶ್‌ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ.
‘ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಮತ್ತು ನಿರ್ದೇಶಕರ ಕಚೇರಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ತಯಾರಿ ಮಾಡಿಕೊಂಡಿದ್ದು, ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಮಾಲೀಕರಾದ ಗಣೇಶ್ ವಿರುದ್ಧ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಎಸಿಎಫ್ ವರದಿಯಲ್ಲಿ ತಿಳಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?: ‘ಬಂಡೀಪುರ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ನೀಡಿರುವ ನಿಬಂಧನೆಗಳನ್ನು ಹಾಗೂ ನೀವು ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಟ್ಟಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು (ಕಟ್ಟಡದ ಅನುಮೋದಿತ ನೀಲ ನಕ್ಷೆ, ಕಂದಾಯ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳಿಂದ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ) ಪತ್ರ ತಲುಪಿದ ಏಳು ದಿನಗಳ ಒಳಗಾಗಿ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರ ಮುಂದೆ ಹಾಜರು ಪಡಿಸಲು ಮತ್ತು ಮುಂದಿನ ಆದೇಶವರೆಗೆ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದೆ’ ಎಂದು ಗಣೇಶ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.
ಪ್ರಾದೇಶಿಕ ಆಯುಕ್ತರಿಗೂ ವರದಿ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಅವರು ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಿಗೆ ವರದಿ ನೀಡಿದ್ದಾರೆ.
‘ಗಣೇಶ್ ಅವರು ಸಮಿತಿಗೆ ಬರೆದುಕೊಟ್ಟಿರುವ ಮುಚ್ಚಳಿಕೆ ಪತ್ರದ ಷರತ್ತುಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಈ ಕಾಮಗಾರಿ ಬಗ್ಗೆ ಕೂಲಂಕಷವಾಗಿ ಎಲ್ಲ ದಾಖಲೆಗಳನ್ನು ಮತ್ತು ನಿರ್ಮಾಣ ಮಾಡುತ್ತಿರುವ ಕಟ್ಟಡವು ತಾತ್ಕಾಲಿಕ ಕಟ್ಟಡವೇ ಅಥವಾ ಶಾಶ್ವತ ಕಟ್ಟಡವೇ ಎಂಬುದರ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಗಣೇಶ್ ಅವರು ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು’ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.