ADVERTISEMENT

ಅರಣ್ಯ ಒತ್ತುವರಿ ತಡೆಗೆ 'ಅಲರ್ಟ್’ ವ್ಯವಸ್ಥೆ; ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:40 IST
Last Updated 27 ಜೂನ್ 2024, 16:40 IST
ಈಶ್ವರ ಖಂಡ್ರೆ 
ಈಶ್ವರ ಖಂಡ್ರೆ    

ಬೆಂಗಳೂರು: ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಅಗತ್ಯವಿದ್ದು, ಉಪಗ್ರಹ ಆಧಾರಿತ ಎಚ್ಚರಿಕೆ ಕಳುಹಿಸುವ (ಅಲರ್ಟ್‌) ವ್ಯವಸ್ಥೆ ರೂಪಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಅರಣ್ಯ ಭೂಮಿ ಒತ್ತುವರಿ ತಡೆ ಮತ್ತು ವೃಕ್ಷ ಸಂರಕ್ಷಣೆ ಕುರಿತು ಅರಣ್ಯ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಅಕ್ಷಾಂಶ ಮತ್ತು ರೇಖಾಂಶದ ಆಧಾರದ ಮೇಲೆ ಜಿಯೋ ರೆಫರೆನ್ಸ್‌ ಮೂಲಕ ರಾಜ್ಯದ ಅರಣ್ಯ ಪ್ರದೇಶದ ಗಡಿಗಳನ್ನು ಗುರುತಿಸಲಾಗಿದೆ. ಈ ದತ್ತಾಂಶವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆ ನೀಡಲಾಗುವುದು. ಇದನ್ನು ಆಧರಿಸಿ ಮರಗಳ ಕಡಿತಲೆ ಮತ್ತು ಭೂ ಒತ್ತುವರಿ ಕುರಿತು ಕಾಲಕಾಲಕ್ಕೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಆದಷ್ಟು ಶೀಘ್ರ ರೂಪಿಸಲು ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿದರು.

ADVERTISEMENT

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಮಾಹಿತಿ ಬರುತ್ತದೆ. ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣ ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ಎಚ್ಚರಿಕೆ ಹೋಗಲು ಇರುವ ವ್ಯವಸ್ಥೆಯ ಮಾದರಿಯಲ್ಲೇ ಮರಗಳ ಅಕ್ರಮ ಕಡಿತಲೆ ಮತ್ತು ಅರಣ್ಯಭೂಮಿ ಒತ್ತುವರಿಗೂ ಒಂದು ಎಚ್ಚರಿಕೆ ರವಾನೆ ವ್ಯವಸ್ಥೆ ಮಾಡಬೇಕು ಎಂದು ಖಂಡ್ರೆ ತಿಳಿಸಿದರು.

ವಲಯ ಅರಣ್ಯಾಧಿಕಾರಿಗಳ ಮಟ್ಟದಲ್ಲಿ ಅರಣ್ಯ ಒತ್ತುವರಿ ಮತ್ತು ಅರಣ್ಯ ಹಕ್ಕು ಕಾಯಿದೆಯ ಅರ್ಜಿಗಳ ಕುರಿತು ಸಂಪೂರ್ಣ ಮಾಹಿತಿಯ ದತ್ತಾಂಶವನ್ನು ಸಿದ್ಧಪಡಿಸಿ, ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಿ ಇವುಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಎಲ್ಲ 64 ಎ ಪ್ರಕರಣಗಳನ್ನು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದಿರುವ ಮೇಲ್ಮನವಿಗಳನ್ನು ಕಾಲಮಿತಿಯಲ್ಲಿ ಅಂದರೆ ಒಂದು ವರ್ಷದೊಳಗೆ ಇತ್ಯರ್ಥಪಡಿಸುವಂತೆಯೂ ಸಲಹೆ ನೀಡಿದರು.

ಅದೇ ರೀತಿ, ಸೆಕ್ಷನ್‌ 4ರ ಪ್ರಕರಣಗಳಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೂ ಕಾಲಮಿತಿಯಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅರಣ್ಯ ಇಲಾಖೆಯ ಮೇಲೆ ಇರುವ ಪ್ರಕರಣಗಳ ಹೊರೆಯನ್ನು ತಗ್ಗಿಸಬೇಕು ಎಂದು ಖಂಡ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.