ADVERTISEMENT

ಚಾರಣ: ದಿನಕ್ಕೆ 300 ಮಂದಿಗೆ ಅವಕಾಶ

10ರಿಂದ 20 ಜನರಿಗೆ ಒಬ್ಬ ಗೈಡ್ ಸೌಲಭ್ಯ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 15:41 IST
Last Updated 3 ಅಕ್ಟೋಬರ್ 2024, 15:41 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಪ್ರತಿದಿನ ತಲಾ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಆನ್‌ಲೈನ್‌ ಮೂಲಕ ಚಾರಣ ಪಥಗಳ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸುವ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನವರಿ 26 ಮತ್ತು 27 ರಂದು ಕುಮಾರಪರ್ವತಕ್ಕೆ 5,000 ದಿಂದ 6,000 ಪ್ರವಾಸಿಗರು ಒಂದೇ ದಿನ ಬಂದ ಕಾರಣ ಗೊಂದಲ ನಿರ್ಮಾಣವಾಗಿತ್ತು. ಇಂತಹ ಗೊಂದಲ ನಿವಾರಿಸಲು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗಿದೆ ಎಂದರು.

ADVERTISEMENT

ಈಗ ಆರಂಭಿಸಿರುವ ವೆಬ್‌ಸೈಟ್‌ನಲ್ಲಿ ರಾಜ್ಯದ ಎಲ್ಲ ಚಾರಣಪಥಗಳ ಟಿಕೆಟ್‌ ಅನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್‌ ಸಿಗದವರು ಬೇರೆ ಚಾರಣಪಥವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಖಂಡ್ರೆ ಹೇಳಿದರು.

ಒಂದು ದೂರವಾಣಿ ಸಂಖ್ಯೆಯ ಮೂಲಕ 10 ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶವಿದೆ. ಮುಂಗಡ ಕಾಯ್ದಿರಿಸಿದವರು ಏಳು ದಿನಗಳ ಮೊದಲು ರದ್ದು ಮಾಡಿದರೆ ಪೂರ್ಣ ಹಣ ಮರಳಿಸಲು ಅವಕಾಶ ಇದೆ. ನಂತರದ ರದ್ದತಿಗೆ ಪೂರ್ತಿ ಹಣ ಸಿಗುವುದಿಲ್ಲ. ಭಾಗಶಃ ಕಡಿತ ಮಾಡಲಾಗುವುದು ಎಂದು ವಿವರಿಸಿದರು.

ಮುಂಗಾರು ಮಳೆ ಸುರಿಯುವ ಸಮಯದಲ್ಲಿ ಚಾರಣ ಮಾಡುವುದು ಸೂಕ್ತವಲ್ಲ. ಅನುಭವ ಇಲ್ಲದ ಚಾರಣಿಗರು ಜಾರಿ ಬೀಳುವ ಅಪಾಯ ಇರುತ್ತದೆ. ಜೊತೆಗೆ ಕೀಟ, ಜೀವ ಜಂತುಗಳಿಗೂ ತೊಂದರೆ ಆಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಚಾರಣ ನಿರ್ಬಂಧಿಸಲಾಗಿತ್ತು ಎಂದು ಖಂಡ್ರೆ ತಿಳಿಸಿದರು.

ಚಾರಣ ಪಥಗಳ ಟಿಕೆಟ್‌ ಅನ್ನು ಚಾರಣ ಏರ್ಪಡಿಸುವ ಕೆಲವು ಖಾಸಗಿ ಸಂಸ್ಥೆಗಳು ಸಗಟು ಖರೀದಿ ಮಾಡುತ್ತವೆ. ಹೀಗಾಗಿ ನೈಜ ಚಾರಣಿಗರಿಗೆ ಟಿಕೆಟ್‌ ಲಭಿಸದಂತಾಗಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ, ಪ್ಯಾನ್‌ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್‌ ಸೇರಿ ಸರ್ಕಾರದ ಭಾವಚಿತ್ರ ಸಹಿತ ಗುರುತಿನ ಚೀಟಿ ಅಪ್‌ಲೋಡ್‌ ಮಾಡಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಗೈಡ್‌ ಸೌಲಭ್ಯ: ಚಾರಣಕ್ಕೆ ಬರುವವರಿಗೆ ಗಿರಿ ಪ್ರದೇಶದಲ್ಲಿರುವ ಸಸ್ಯ, ಪ್ರಾಣಿ, ಕೀಟ, ಪಕ್ಷಿ ಸಂಕುಲದ ಬಗ್ಗೆ ಮಾಹಿತಿ ನೀಡಲು ಮತ್ತು ಆ ಪ್ರದೇಶದ ಸಂಕ್ಷಿಪ್ತ ಇತಿಹಾಸ ತಿಳಿಸಲು ಚಾರಣದ ವೇಳೆ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಪ್ರತಿ 10 ರಿಂದ 20 ಚಾರಣಿಗರಿಗೆ ಒಬ್ಬರಂತೆ ಗೈಡ್‌ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದ ಸ್ಕಂದಗಿರಿ ಚಾರಣಪಥದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬ್ಲಾಕ್‌ ಮಾಡಲು ಖಾಸಗಿ ಪ್ರವಾಸೋದ್ಯಮ ಸಂಸ್ಥೆಗಳೊಂದಿಗೆ ಕೆಲವು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದರು.

ನಕಲಿ ಟಿಕೆಟ್‌ ಬಳಸಿ ಕೆಲವರು ಚಾರಣಕ್ಕೆ ಹೋಗುತ್ತಿದ್ದಾರೆ. ಕೆಲವು ಚಾರಣ ಪಥಗಳಲ್ಲಿ ಸಿಬ್ಬಂದಿಯೇ ನಕಲಿ ಟಿಕೆಟ್‌ ಮಾಡಿಸಿ ಚಾರಣಿಗರಿಗೆ ಒಳ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇದನ್ನು ತಡೆಗಟ್ಟಲು ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ಸಂಚಾರಿ ವಿಚಕ್ಷಣ ದಳ ರಚಿಸಲಾಗುವುದು ಎಂದು ಹೇಳಿದರು.

5 ತಾಣಗಳಿಗೆ ಟಿಕೆಟ್‌ ಕಾದಿರಿಸಬಹುದು

  • ಕುಮಾರ ಪರ್ವತ– ಸುಬ್ರಹ್ಮಣ್ಯ

  • ಬೀದಹಳ್ಳಿ – ಕುಮಾರ ಪರ್ವತ

  • ಬೀದಹಳ್ಳಿ -ಕುಮಾರ ಪರ್ವತ – ಸುಬ್ರಹ್ಮಣ್ಯ

  • ಚಾಮರಾಜನಗರ - ನಾಗಮಲೈ

  • ತಲಕಾವೇರಿ-ನಿಶಾನೆಮೊಟ್ಟೆ

ಅಲ್ಲದೇ ಈ ತಿಂಗಳ ಕೊನೆಯೊಳಗೆ 40 ಚಾರಣಪಥಗಳನ್ನು ಸೇರಿಸಲಾಗುವುದು.  ವನ್ಯಜೀವಿ ಸಫಾರಿ ಮತ್ತು ಬೋಟ್‌ ಸಫಾರಿಗೂ ಇದರಲ್ಲೇ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು. ಚಾರಣ ಪಥಗಳ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸುವ https://aranyavihaara.karnataka.gov.in ವೆಬ್ ಸೈಟ್

ಪ್ಲಾಸ್ಟಿಕ್ ನಿಷೇಧ; 2 ಹಂತದ ತಪಾಸಣೆ

ಚಾರಣಪಥ ಮತ್ತು ಅರಣ್ಯದೊಳಗಿನ ರಸ್ತೆಯಲ್ಲಿ ಸಂಚರಿಸುವಾಗ ಪ್ಲಾಸ್ಟಿಕ್‌ ನೀರಿನ ಬಾಟಲಿ ಕ್ಯಾರಿಬ್ಯಾಗ್‌ ಅಲ್ಲದೇ ತಿಂಡಿ ಪೊಟ್ಟಣ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಕಾಡಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತು ಚಾರಣಕ್ಕೆ ಬರುವವರಿಗೆ ಮೊದಲ ಹಂತದಲ್ಲಿ ನಿಷೇಧಿತ ವಸ್ತುಗಳನ್ನು ಸ್ವಯಂ ಪ್ರೇರಿತರಾಗಿ ಕಸದ ಬುಟ್ಟಿಗೆ ಹಾಕಲು ತಿಳಿಸಲಾಗುವುದು. 2 ನೇ ಹಂತದಲ್ಲಿ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಪ್ಲಾಸ್ಟಿಕ್‌ ಬಾಟಲಿ ಕ್ಯಾರಿಬ್ಯಾಗ್‌ ಮದ್ಯದ ಬಾಟಲಿ ಸಿಗರೇಟ್‌ ಬೆಂಕಿ ಪೊಟ್ಟಣ ಇತ್ಯಾದಿ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.