ADVERTISEMENT

ಜೋಗ ಜಲಪಾತದ ಬಳಿ ಪಂಚತಾರಾ ಹೋಟೆಲ್‌, ರೋಪ್‌ ವೇ ನಿರ್ಮಾಣಕ್ಕೆ ಅರಣ್ಯ ಅನುಮತಿ

ಎಸಿಎಸ್‌ಗೆ ಪಿಸಿಸಿಎಫ್‌ ಪತ್ರ; ಪೂರಕ ವರದಿ ನೀಡಿದ ಡಿಸಿಎಫ್‌ಗಳು

ಎಸ್.ರವಿಪ್ರಕಾಶ್
Published 7 ನವೆಂಬರ್ 2024, 0:45 IST
Last Updated 7 ನವೆಂಬರ್ 2024, 0:45 IST
<div class="paragraphs"><p>ಜೋಗ ಜಲಪಾತ</p></div>

ಜೋಗ ಜಲಪಾತ

   

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಜೋಗ ಜಲಪಾತದ ಬಳಿ ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೆಲ್‌ ಮತ್ತು ರೋಪ್‌ ವೇ ನಿರ್ಮಿಸಲು ಅರಣ್ಯ ಇಲಾಖೆ ಕೊನೆಗೂ ಅನುಮೋದನೆ ನೀಡಿದೆ.

ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಮತ್ತು ನೋಡಲ್ ಅಧಿಕಾರಿ ಬ್ರಿಜೇಶ್ ಕುಮಾರ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ವಿಷಯವಾಗಿ ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಅರಣ್ಯ ಕಾಯ್ದೆಗೆ ಹೊಸ ತಿದ್ದುಪಡಿ ಆದ ಬಳಿಕ ಐದು ಹೆಕ್ಟೇರ್ ಒಳಗಿನ ಅರಣ್ಯ ಭೂಮಿ ಪರಿವರ್ತನೆ ಯೋಜನೆಗಳಿಗೆ ಅರಣ್ಯ ಪಡೆ ಮುಖ್ಯಸ್ಥರ ಶಿಫಾರಸು ಇಲ್ಲದೆಯೇ ರಾಜ್ಯ ಸರ್ಕಾರಕ್ಕೆ ನೇರವಾಗಿ ಶಿಫಾರಸು ಮಾಡುವ ಅಧಿಕಾರ ನೋಡಲ್‌ ಅಧಿಕಾರಿಗೆ ಲಭಿಸಿದೆ.

ಜೋಗ ಪ್ರದೇಶದಲ್ಲಿ ಹೋಟೆಲ್ ಮತ್ತು ರೆಸಾರ್ಟ್ ಪ್ರಸ್ತಾವವನ್ನು ಅರಣ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ 2014ರಲ್ಲಿ ಮೊದಲ ಬಾರಿಗೆ ತಿರಸ್ಕರಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ 2021ರಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿತ್ತು.  

ಪಂಚತಾರಾ ಹೋಟೆಲ್‌ ಮತ್ತು ರೋಪ್‌ವೇ ನಿರ್ಮಿಸುವುದರ ಪರವಾಗಿ ಸಾಗರ ಮತ್ತು ಶಿರಸಿ ಡಿಸಿಎಫ್‌ಗಳು ವರದಿ ನೀಡಿದ್ದಾರೆ. ಸಾಗರ ರಕ್ಷಿತ ಅರಣ್ಯ ಪ್ರದೇಶದ ತಳಕಳಲೆ ಮತ್ತು ಶಿರಸಿ ರಕ್ಷಿತ ಅರಣ್ಯ ಪ್ರದೇಶದ ಕೋಡ್ಕಣಿ ಪ್ರದೇಶದಲ್ಲಿ ಹೋಟೆಲ್‌ ಮತ್ತು ರೋಪ್‌ವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅರಣ್ಯ, ವನ್ಯಜೀವಿ ಸಂಪತ್ತಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ಹೆಚ್ಚು ಮರಗಳ ಹನನವೂ ಆಗುವುದಿಲ್ಲ ಎಂದು ಈ ವರದಿ ಹೇಳಿದೆ.

ತಳಕಳಲೆಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಪ್ರದೇಶದಲ್ಲಿ 35 ಮರಗಳು ಮಾತ್ರ ಇವೆ. ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಯಾವುದೇ ಸಸ್ಯ ಪ್ರಭೇದಗಳಿಲ್ಲ. ಅಲ್ಲದೆ, ಈ ಸ್ಥಳವು ಯಾವುದೇ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ, ಹುಲಿಸಂರಕ್ಷಿತ, ಆನೆ ಕಾರಿಡಾರ್‌ ಮತ್ತು ವನ್ಯಜೀವಿ ಸಂಚಾರದ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುವುದಿಲ್ಲ. 1980ರ ಅರಣ್ಯ ಸಂರಕ್ಷಣೆ ಮತ್ತು ಸಮೃದ್ಧಿ ನಿಯಮದ ಅಡಿ ಯಾವುದೇ ಉಲ್ಲಂಘನೆ ಆಗಿಲ್ಲ ಎಂಬ ಅಂಶ ಡಿಸಿಎಫ್‌ ವರದಿಯಲ್ಲಿದೆ. ಶಿರಸಿ ಡಿಸಿಎಫ್‌ ನೀಡಿರುವ ವರದಿಯೂ ಬಹುತೇಕ ಅದೇ ರೀತಿ ಇದೆ. ಕೋಡ್ಕಣಿಯಲ್ಲಿ 5 ಮರಗಳು ಮಾತ್ರ ಉದ್ದೇಶಿತ ಪ್ರದೇಶದಲ್ಲಿವೆ ಎಂದು ವರದಿ ಉಲ್ಲೇಖಿಸಿದೆ.

‘ಈ ಪ್ರದೇಶ ಶರಾವತಿ ಕಣಿವೆಯಲ್ಲಿ ಬರುತ್ತದೆ. ಜಲ ವಿದ್ಯುತ್, ಜಲಾಶಯ, ಹೆದ್ದಾರಿ, ರೈಲು ಮತ್ತಿತರ ಯೋಜನೆಗಳಿಂದ ಶರಾವತಿ ಕಣಿವೆಯಲ್ಲಿ ಈಗಾಗಲೇ ಒತ್ತಡ ಸೃಷ್ಟಿಯಾಗಿದೆ. ಈಗ ಅಲ್ಲಿ ಪಂಚತಾರಾ ಹೋಟೆಲ್‌ ಅಗತ್ಯವೇನಿದೆ. ಒಂದು ವೇಳೆ ಅಗತ್ಯ ಇದೇ ಎಂದಾಗಿದ್ದರೆ ತಾಳಗುಪ್ಪದಲ್ಲಿ ನಿರ್ಮಿಸಬಹುದು. ಕೇಂದ್ರ ಸರ್ಕಾರ ಒಂದು ಬಾರಿ ಪ್ರಸ್ತಾವವನ್ನು ತಿರಸ್ಕರಿಸಿದೆ. ಹೀಗಿದ್ದರೂ ರಾಜ್ಯ ಅರಣ್ಯ ಇಲಾಖೆ ಮತ್ತೆ ಶಿಫಾರಸು ಮಾಡಿರುವುದು ಅಚ್ಚರಿ ತರಿಸಿದೆ’ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರಕ್ಕೆ ಪರಿಷ್ಕೃತ ಪ್ರಸ್ತಾವ ಸಲ್ಲಿಕೆ
‘ಈ ಹಿಂದೆ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವದಲ್ಲಿನ ಮಾಹಿತಿ ಅಪೂರ್ಣವಾಗಿತ್ತು. ಹೆಚ್ಚುವರಿ ಮಾಹಿತಿ ನೀಡಬೇಕು ಎಂದು ಪ್ರಸ್ತಾವವನ್ನು ತಿರಸ್ಕರಿಸಿತ್ತು. ಅದರಲ್ಲಿ ರೋಪ್‌ವೇಗೆ ಬಳಸುವ ಸಾಧನಗಳ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಈಗ ಎಲ್ಲ ಅಂಶಗಳನ್ನು ಒಳಗೊಂಡ ಪರಿಷ್ಕೃತ ಪ್ರಸ್ತಾವವನ್ನು ಸಿದ್ಧಪಡಿಸಲಾಗುವುದು. ಹಳೆಯ ಪ್ರಸ್ತಾವ ಹಿಂದಕ್ಕೆ ಪಡೆಯಲಾಗುವುದು’ ಎಂದು ಬ್ರಿಜೇಶ್ ಕುಮಾರ್‌ ಹೇಳಿದ್ದಾರೆ.
ಪಂಚತಾರಾ ಹೋಟೆಲ್‌ ಏಕೆ?
ಜೋಗಕ್ಕೆ ಪ್ರತಿ ವರ್ಷ ಲಕ್ಷಗಟ್ಟಲೆ ಪ್ರವಾಸಿಗರು ಬರುತ್ತಾರೆ. ಜೂನ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಪ್ರತಿ ದಿನ 40 ಸಾವಿರದಿಂದ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಅತ್ಯುತ್ತಮ ಹೋಟೆಲ್‌ನ ಅಗತ್ಯವಿರುವುದರಿಂದ ಪಿಪಿಪಿ ಮಾದರಿಯಲ್ಲಿ ಪಂಚತಾರಾ ಹೋಟೆಲ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಜಲಪಾತದ ಸಮೀಪವೇ ಶರಾವತಿ ನದಿಗೆ ಒಂದು ತಟದಿಂದ ಇನ್ನೊಂದು ತಟಕ್ಕೆ ರೋಪ್‌ವೇ ಹಾಕಲಾಗುವುದು. ಇವುಗಳ ನಿರ್ಮಾಣದ ಅಂದಾಜು ವೆಚ್ಚ ₹100 ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.