ನವದೆಹಲಿ: ಬೆಳಗಾವಿ, ಧಾರವಾಡ ವೃತ್ತ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಅರಣ್ಯ ಒತ್ತುವರಿ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ನಿರ್ದೇಶನ ನೀಡಿದೆ.
ಕಳೆದೆರಡು ವರ್ಷಗಳಿಂದ ಬೆಳಗಾವಿ ಹಾಗೂ ಧಾರವಾಡ ವೃತ್ತ ಸೇರಿದಂತೆ ರಾಜ್ಯದಾದ್ಯಂತ ಹೊಸ ಅರಣ್ಯ ಒತ್ತುವರಿ ಪ್ರಕರಣಗಳು ವ್ಯಾಪಕ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದು ಆರೋಪಿಸಿ ಧಾರವಾಡದ ನಿವಾಸಿ ಹಣಮಂತ ಎಂಬುವರು ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸಚಿವಾಲಯದ ಉಪ ಮಹಾನಿರ್ದೇಶಕರು (ಅರಣ್ಯ) ಸೂಚಿಸಿದ್ದಾರೆ.
ಬೆಳಗಾವಿ ವೃತ್ತದಲ್ಲಿ 2022–23ರಲ್ಲಿ 110 ಹೊಸ ಒತ್ತುವರಿ ಪ್ರಕರಣಗಳು, 2023–24ರಲ್ಲಿ 64 ಹೊಸ ಪ್ರಕರಣಗಳು ಪತ್ತೆ ಆಗಿವೆ. ಧಾರವಾಡ ವೃತ್ತದಲ್ಲಿ 56 ಕಡೆಗಳಲ್ಲಿ ಅರಣ್ಯ ಒತ್ತುವರಿ ಆಗಿದೆ. ಆದರೆ, ಒತ್ತುವರಿ ತಡೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಲ್ಲಿ ವೃತ್ತದ ಸಿಸಿಎಫ್, ಡಿಸಿಎಫ್, ಎಸಿಎಫ್ ಅವರ ಲೋಪ ಎದ್ದು ಕಾಣುತ್ತಿದೆ ಎಂದು ಹಣಮಂತ ಅವರು ದೂರಿನಲ್ಲಿ ತಿಳಿಸಿದ್ದರು.
ಅರಣ್ಯಗಳ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ 2001ರಲ್ಲಿ ಆದೇಶಿಸಿದೆ. ಹೊಸ ಒತ್ತುವರಿಗೆ ಅನುವು ಮಾಡಿಕೊಡಬಾರದು ಎಂದು ಪರಿಸರ ಸಚಿವಾಲಯ 2022ರಲ್ಲಿ ಸೂಚಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯ ಮಟ್ಟದ ಸಮಿತಿ ರಚಿಸಬೇಕು. ಈ ಸಮಿತಿಯು ಆರು ತಿಂಗಳಿಗೊಮ್ಮೆ ಸಭೆ ಸೇರಿ ಪರಾಮರ್ಶೆ ನಡೆಸಬೇಕು. ಒತ್ತುವರಿ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ತಾಕೀತು ಮಾಡಿದೆ. ಅರಣ್ಯದ ಹೊಸ ಒತ್ತುವರಿ ತಡೆಯಲು ವಿಫಲರಾದ ಡಿಸಿಎಫ್, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪರಿಸರ ಸಚಿವಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆದರೆ, ಅಧಿಕಾರಿಗಳು ಒತ್ತುವರಿ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವರ ಟಿಪ್ಪಣಿಗೂ ಕಿಮ್ಮತ್ತು ನೀಡಿಲ್ಲ ಎಂದು ಅವರು ದೂರಿದ್ದರು.
ಐದು ವರ್ಷಗಳಿಂದ ಐಎಫ್‌ಎಸ್ ಅಧಿಕಾರಿ ಮಂಜುನಾಥ ಚವಾಣ್ ಅವರು ಬೆಳಗಾವಿ ಹಾಗೂ ಧಾರವಾಡ ವೃತ್ತದಲ್ಲಿ ಸಿಸಿಎಫ್ ಆಗಿದ್ದಾರೆ. ಹೊಸ ಒತ್ತುವರಿ ತಡೆಯಲು ವಿಫಲರಾಗಿರುವ ಚವಾಣ್ ಹಾಗೂ ಉಳಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.