ADVERTISEMENT

61 ಎಕರೆ ಅರಣ್ಯ ಭೂಮಿ ಮಾರ್ಪಡು: ಎ.ಸಿ. ವಿರುದ್ಧ ಪ್ರಕರಣಕ್ಕೆ ಕೇಂದ್ರ ಅನುಮತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 15:19 IST
Last Updated 19 ಡಿಸೆಂಬರ್ 2023, 15:19 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ನವದೆಹಲಿ: 61.32 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ಅಕ್ರಮವಾಗಿ ಮಾರ್ಪಡಿಸಿದ ಕುರಿತು ಹಾಸನದ ಆಗಿನ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ. 

ಈ ಅಧಿಕಾರಿ ವಿರುದ್ಧ 45 ದಿನಗಳೊಳಗೆ ಪ್ರಕರಣ ದಾಖಲಿಸಬೇಕು ಹಾಗೂ ಕಾಲ ಕಾಲಕ್ಕೆ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವಾಲಯದ ಉಪ ಮಹಾನಿರೀಕ್ಷಕ ಎಂ.ಕೆ. ಶಂಭು ಅವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಡಿಸೆಂಬರ್‌ 14ರಂದು ಸೂಚಿಸಿದ್ದಾರೆ. 

ADVERTISEMENT

ನವೆಂಬರ್‌ 6ರಂದು ಪತ್ರ ಬರೆದಿದ್ದ ಎಂ.ಕೆ. ಶಂಭು ಅವರು, ‘ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಹಾಗೂ ಭೂ ಅಕ್ರಮದ ಬಗ್ಗೆ ಹಾಸನದ ಡಿಸಿಎಫ್‌ ವರದಿ ನೀಡಿದ್ದಾರೆ. ಈ ಸಂಬಂಧ ಒಂದು ತಿಂಗಳ ಒಳಗೆ ವಾಸ್ತವಾಂಶದ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದರು.

‘ಈ ಅಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ 2022ರ ಮಾರ್ಚ್‌ 4ರಂದು ಸಚಿವಾಲಯ ಸೂಚಿಸಿತ್ತು. ಆದರೆ, ಅರಣ್ಯ ಇಲಾಖೆ ವರದಿ ಸಲ್ಲಿಸಿರಲಿಲ್ಲ. ಮತ್ತೊಮ್ಮೆ ಜ್ಞಾ‍ಪನಾ ಪತ್ರವನ್ನೂ ಕಳುಹಿಸಲಾಗಿತ್ತು’ ಎಂದು ಅವರು ಹೇಳಿದ್ದರು. ಬಳಿಕ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದ ಅರಣ್ಯ ಇಲಾಖೆ, ಲೋಪ ಎಸಗಿದ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿತ್ತು. 

ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದ ಈ ಪ್ರಕರಣವನ್ನು ಹಾಸನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಅರಣ್ಯ ಸಂಚಾರಿ ದಳ) ಕಾರ್ಯನಿರ್ವಹಿಸುತ್ತಿದ್ದ ಎನ್‌.ರವೀಂದ್ರ ಕುಮಾರ್ ಅವರು 2022ರ ಫೆಬ್ರುವರಿಯಲ್ಲಿ ಪತ್ತೆ ಹಚ್ಚಿದ್ದರು. ಹಾಸನದ ತ್ಯಾವಿಹಳ್ಳಿಯ ಸರ್ವೆ ನಂಬರ್ 22ರಲ್ಲಿ ಹರಡಿರುವ 61.32 ಎಕರೆ ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.