ADVERTISEMENT

ನಿಯಮ ಗಾಳಿಗೆ ತೂರಿ ಅರಣ್ಯ ಭೂಮಿ ಡಿನೋಟಿಫೈಗೆ ಅರ್ಜಿ: ಅಧಿಕಾರಿಗಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 23:16 IST
Last Updated 25 ಸೆಪ್ಟೆಂಬರ್ 2024, 23:16 IST
ಈಶ್ವರ ‌ಖಂಡ್ರೆ
ಈಶ್ವರ ‌ಖಂಡ್ರೆ   

ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ಪೀಣ್ಯ- ಜಾಲಹಳ್ಳಿ ಸರ್ವೆ ನಂಬರ್‌ 1 ಮತ್ತು 2ರಲ್ಲಿ 599 ಎಕರೆ ಅರಣ್ಯ ಭೂಮಿಯನ್ನು (ಎಚ್‌ಎಂಟಿ ಪ್ರದೇಶ) ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಕುರಿತು ಟಿಪ್ಪಣಿ ನೀಡಿರುವ ಖಂಡ್ರೆ, ‘ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅರಣ್ಯ
ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಏಳು ದಿನಗಳ ಒಳಗೆ ಉತ್ತರ ಪಡೆಯಬೇಕು. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ಪ್ರಸ್ತಾವ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರಡಿ ‘ಮೀಸಲು ಅರಣ್ಯ’ ಎಂದು ಅಧಿ ಸೂಚಿತ ಭೂಮಿಯನ್ನು ‘ಅರಣ್ಯ ಅಲ್ಲ’ ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು. ಅಲ್ಲದೆ, ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ, ಅದರ ಮೌಲ್ಯ ₹5 ಕೋಟಿಗಿಂತ ಹೆಚ್ಚಾಗಿದ್ದರೆ ಸಚಿವ ಸಂಪುಟದ ಪೂರ್ವಾನುಮತಿ ಪಡೆಯ
ಬೇಕು ಎಂದು ಕರ್ನಾಟಕ ಸರ್ಕಾರದ ಕಾರ್ಯ
ಕಲಾಪಗಳನಿರ್ವಹಣಾ ನಿಯಮಾವಳಿ 1977ರಲ್ಲಿ ತಿಳಿಸಲಾಗಿದೆ.

ADVERTISEMENT

ಆದರೆ, ಸಚಿವರ ಗಮನಕ್ಕೂ ತಾರದೆ, ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಕೆಲವು ಅಧಿಕಾರಿಗಳು ತಮ್ಮ ಮಟ್ಟದಲ್ಲೇ ಆದೇಶ ಹೊರಡಿಸಿ ದ್ದಾರೆ’ ಎಂದು ಸಚಿವರು ಉಲ್ಲೇಖಿಸಿದ್ದಾರೆ.

‘ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ಎಚ್‌ಎಂಟಿ ಸಂಸ್ಥೆಗೆ ಇಲಾಖೆ ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಹೀಗಾಗಿ, ಎಚ್‌ಎಂಟಿ ಸಂಸ್ಥೆ ಈವರೆಗೆ 165 ಎಕರೆ ಜಮೀನನ್ನು ₹313.65 ಕೋಟಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ’ ಎಂದು ಖಂಡ್ರೆ ತಿಳಿಸಿದ್ದಾರೆ.

‘2015ರಲ್ಲಿ ಅಂದಿನ ಎಪಿಸಿ‌ಸಿಎಫ್ ವೆಂಕಟಸುಬ್ಬಯ್ಯ ಅವರು ಎಚ್‌ಎಂಟಿ ವಶದಲ್ಲಿದ್ದ ಅರಣ್ಯ ಭೂಮಿ ತೆರವಿಗೆ 64ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿದ್ದರು. ಆ ಆದೇಶದ ವಿರುದ್ಧ ಎಚ್‌ಎಂಟಿ ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿ ಸಲ್ಲಿಸಿಲ್ಲ’ ಎಂದೂ ಸಚಿವರು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ನಲ್ಲಿ ಅರಣ್ಯ ಇಲಾಖೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆದು ಲಾಲ್ ಬಾಗ್ ಅಥವಾ ಕಬ್ಬನ್ ಉದ್ಯಾನದ ಮಾದರಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುವುದು’ ಎಂದೂ ಖಂಡ್ರೆ ತಿಳಿಸಿದ್ದಾರೆ.

* ಒಟ್ಟು 599 ಎಕರೆ ಅರಣ್ಯ ಡಿನೋಟಿಫೈ * 165 ಎಕರೆ ₹ 313.65 ಕೋಟಿಗೆ ಮಾರಾಟ * ನಿಯಮಗಳನ್ನು ಗಾಳಿಗೆ ತೂರಿ ‘ಸುಪ್ರೀಂ’ಗೆ ಐಎ

ಎಚ್‌ಎಂಟಿ ವಶದಲ್ಲಿರುವ ಅರಣ್ಯ ಪ್ರದೇಶಕ್ಕೆ ಈಶ್ವರ ಖಂಡ್ರೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಮ್ಮ ಹಂತದಲ್ಲಿಯೇ ಅರಣ್ಯ ಭೂಮಿ ಡಿನೋಟಿಫೈ ಮಾಡಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸುವಂತಿದೆ
ಈಶ್ವರ ಖಂಡ್ರೆ, ಅರಣ್ಯ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.