ADVERTISEMENT

ಶೋಲಾ ಅರಣ್ಯ ಒತ್ತುವರಿ: ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:04 IST
Last Updated 28 ಫೆಬ್ರುವರಿ 2024, 16:04 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು:  ಹಾಸನ ಜಿಲ್ಲೆಯ ಸಕಲೇಶಪುರ ಅರಣ್ಯ ವಲಯದಲ್ಲಿ ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ನಿರ್ಮಾಣಕ್ಕಾಗಿ 63 ಎಕರೆ 24 ಗುಂಟೆ ಅರಣ್ಯ ಜಮೀನುಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.

ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ಜಮೀನುಗಳ ಲೆಕ್ಕ ಪರಿಶೋಧನೆ ನಡೆಸುವಂತೆ 2023ರ ಸೆಪ್ಟೆಂಬರ್‌ 27ರ ‘ಪ್ರಜಾವಾಣಿ’ಯ ಸಂಚಿಕೆಯಲ್ಲಿ ಸಂಪಾದಕೀಯ ಪ್ರಕಟಿಸಲಾಗಿತ್ತು. ಅದರಲ್ಲಿ ಉಲ್ಲೇಖವಾಗಿದ್ದ ಅಂಶಗಳನ್ನು ಆಧರಿಸಿ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಸಕಲೇಶಪುರ ಅರಣ್ಯ ವಲಯದಲ್ಲಿ ಶೋಲಾ ಅರಣ್ಯ ಒತ್ತುವರಿಯಾಗಿರುವ ಕುರಿತು ಸ್ಥಳ ತನಿಖೆ, ಭೂಮಾಪನ ನಡೆಸಿ ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಲಯವು ಹಾಸನ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಸಕಲೇಶಪುರ ಉ‍ಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸ್ಥಳ ತನಿಖೆ ಮತ್ತು ಭೂಮಾಪನ ನಡೆಸಲಾಗಿತ್ತು. ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿಯ ಅಚ್ಚನಹಳ್ಳಿ ಗ್ರಾಮದ ಸರ್ವೆ ನಂಬರ್‌ 91, 92, 45 ಮತ್ತು 93ರಲ್ಲಿ 13 ಪ್ರಕರಣಗಳಲ್ಲಿ 63 ಎಕರೆ 24 ಗಂಟೆ ಅರಣ್ಯ ಜಮೀನು ಒತ್ತುವರಿಯಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಯವರು ಫೆಬ್ರುವರಿ 16ರಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.

ADVERTISEMENT

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸೋಮವಾರ ಟಿಪ್ಪಣಿ ಹೊರಡಿಸಿರುವ ಸಚಿವರು, ‘ಸಕಲೇಶಪುರ ಅರಣ್ಯ ವಲಯದಲ್ಲಿ ರೆಸಾರ್ಟ್‌, ಹೋಂ ಸ್ಟೇ ನಿರ್ಮಾಣಕ್ಕಾಗಿ ಶೋಲಾ ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎಷ್ಟು ಜಮೀನುಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ ಎಂಬುದರ ಕುರಿತು ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.