ADVERTISEMENT

ಸೋಲಿನ ಪರಾಮರ್ಶೆಗೆ ಸತ್ಯಶೋಧ‌ನಾ ಸಮಿತಿ ರಚನೆ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:17 IST
Last Updated 1 ಜುಲೈ 2024, 16:17 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿನ ಪರಾಮರ್ಶೆಗೆ ಸತ್ಯಶೋಧನಾ ಸಮಿತಿ ರಚಿಸಲಾಗುವುದು. ಈ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ನೀಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಹೊರತಾಗಿ ಇತರ ಕಡೆ ಪಕ್ಷಕ್ಕೆ ಏಕೆ ಸೋಲಾಯಿತು ಎಂದು ಸತ್ಯಶೋಧನಾ ಸಮಿತಿ ಪರಾಮರ್ಶೆ ನಡೆಸಲಿದೆ‌. ನನ್ನ ಮತ್ತು ಮುಖ್ಯಮಂತ್ರಿ ನೇತೃತ್ವದಲ್ಲಿ ವಿಭಾಗವಾರು ನಾಲ್ಕು ಸಭೆಗಳನ್ನು ನಡೆಸಲಾಗುವುದು’ ಎಂದರು.

ಶಾಸಕರ ಮನೆಯಲ್ಲಿ ಸಭೆ ನಡೆಸುವಂತಿಲ್ಲ‌: ‘ಪಕ್ಷದ ಸಭೆಗಳನ್ನು ಶಾಸಕರ ಮನೆಯಲ್ಲಿ ನಡೆಸುವಂತಿಲ್ಲ. ಪಕ್ಷದ ಕಚೇರಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಸಬೇಕು. ಶಾಸಕರ ಮನೆಯಲ್ಲಿ ಸಭೆ ನಡೆಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹ ಸಭೆಗೆ ಶಾಸಕರ ಬೆಂಬಲಿಗರನ್ನು ಹೊರತುಪಡಿಸಿ, ಇತರ ಪದಾಧಿಕಾರಿಗಳು ಹೋಗುವುದಿಲ್ಲ ಎಂಬ ಕಾರಣಕ್ಕೆ ಈ ಕ್ರಮ’ ಎಂದು ಶಿವಕುಮಾರ್‌ ಹೇಳಿದರು.

ADVERTISEMENT

‘ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ವರ್ಷ ಹಾಗೂ ಎರಡು ವರ್ಷ ಅವಧಿಗೆ ಅಧಿಕಾರ ನಡೆಸಿದವರು ಮತ್ತು ಸಕ್ರಿಯವಾಗಿ ಇಲ್ಲದಿರುವವರನ್ನು ಬದಲಿಸಲು ಪ್ರಸ್ತಾವ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ’ ಎಂದರು. 

ನೂತನ ವಿಭಾಗ: ‌‘ಪಕ್ಷದಲ್ಲಿ ಸಾರಿಗೆ, ಕೊಳೆಗೇರಿ, ಸಹಕಾರಿ, ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ವಿಭಾಗಗಳನ್ನು ಆರಂಭಿಸಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಅಧ್ಯಕ್ಷರು ಮತ್ತು  ಪದಾಧಿಕಾರಿಗಳನ್ನು ನೇಮಿಸಲಾಗುವುದು’ ಎಂದೂ ಹೇಳಿದರು.

ಸಭೆಯಲ್ಲಿ ನಿರ್ಣಯ: ‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದ ತಕ್ಷಣ ಷೇರು ಪೇಟೆ ಹಗರಣ, ನೀಟ್ ಮತ್ತು ನೆಟ್ ಹಗರಣ ನಡೆಯಿತು. ಇದರ ಕುರಿತು ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮುಂದುವರೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.