ADVERTISEMENT

ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ನೇರ ಕಾರಣ: ಎಚ್‌.ಡಿ ದೇವೇಗೌಡ

ವಿರೋಧ ಪಕ್ಷದ ನಾಯಕನಾಗಬೇಕೆಂಬ ಸಿದ್ದರಾಮಯ್ಯ ಹಂಬಲ ಈಗ ಈಡೇರಿದೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 4:51 IST
Last Updated 22 ಆಗಸ್ಟ್ 2019, 4:51 IST
   

ಬೆಂಗಳುರು: ಜೆಡಿಎಸ್‌ ಅಧಿಕಾರಕ್ಕೆ ಬರುವುದನ್ನು ಸಹಿಸದ, ಕುಮಾರಸ್ವಾಮಿ ಸಿಎಂ ಆಗಿರುವುದನ್ನು ಅರಗಿಸಿಕೊಳ್ಳದ ಸಿದ್ದರಾಮಯ್ಯ ಅವರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ.ವಿರೋಧ ಪಕ್ಷದ ನಾಯಕನಾಗಬೇಕು ಎಂಬ ಸಿದ್ದರಾಮಯ್ಯನವರಹಂಬಲ ಈಗ ಈಡೇರಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಸರ್ಕಾರ ಪತನದ ನಂತರ ಇದೇ ಮೊದಲ ಬಾರಿಗೆ ಮೈತ್ರಿಯ ಒಳಗಿನ ಬೆಳವಣಿಗೆಗಳ ಕುರಿತು ಜೆಡಿಎಸ್‌ ವರಿಷ್ಠದೇವೇಗೌಡ ಅವರು ರಾಷ್ಟ್ರೀಯ ಆಂಗ್ಲ ದಿನ ಪತ್ರಿಕೆ ‘ದಿ ಹಿಂದೂ’ಗೆ ಸಂದರ್ಶನ ನೀಡಿದ್ದಾರೆ. ಒಂದು ಕಾಲದ ತಮ್ಮ ಒಡನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೇವೇಗೌಡರು ಸಂದರ್ಶನದಲ್ಲಿಗುಡುಗಿದ್ದಾರೆ.

ಸಂದರ್ಶನದ ಆಯ್ದ ಭಾಗ ಇಲ್ಲಿದೆ...

ADVERTISEMENT

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬುದೇ ಕಾಂಗ್ರೆಸ್‌ ಹೈಕಮಾಂಡ್‌ನ ಉದ್ದೇಶವಾಗಿತ್ತು. ಆದರೆ, ಈ ನಿರ್ಧಾರ ಸಿದ್ದರಾಮಯ್ಯ ಅವರಿಗೆ ಒಪ್ಪಿತವಾಗಿರಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯವಿತ್ತು. ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟವಿರಲಿಲ್ಲ. ಅದೂ ಅಲ್ಲದೇ, ಚಾಮುಂಡೇಶ್ವರಿಯಲ್ಲಿ ಆಗಿದ್ದ ಸೋಲಿನಿಂದ ಸಿದ್ದರಾಮಯ್ಯ ಜೆಡಿಎಸ್‌ ವಿರುದ್ಧ ಕುದಿಯುತ್ತಲೇ ಇದ್ದರು.

ಮೈತ್ರಿ ರಚನೆ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿರಲಿಲ್ಲ. ಹೀಗಾಗಿಯೇ ಅವರ ಬೆಂಬಲಿಗರು ನನ್ನನ್ನು ಮತ್ತು ನನ್ನ ಮೊಮ್ಮಗನನ್ನು ಸೋಲಿಸಿದರು. ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಕಾರಣ ಎಂಬುದನ್ನು ಅವರ ಬೆಂಬಲಿಗರೇ ಹೇಳಿದ್ದಾರೆ. ನಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಅವರು ನೋಟಿಸ್‌ ಕೊಟ್ಟಿದ್ದಾರೆಯೇ? ಕಾಂಗ್ರೆಸ್‌ನಲ್ಲಿ ಈಗ ಸಿದ್ದರಾಮಯ್ಯ ವಿರುದ್ಧ ಯಾರೂ ಮಾತನಾಡದ ಪರಿಸ್ಥಿತಿ ಇದೆ.

ಸಿದ್ದರಾಮಯ್ಯ ಅವರ ಮುಖ್ಯ ಉದ್ದೇಶ ತಾವು ವಿರೋಧ ಪಕ್ಷದ ನಾಯಕನಾಗಿರಬೇಕು ಎಂಬುದು. ಅದಕ್ಕಾಗಿಯೇ ಯಡಿಯೂರಪ್ಪ ಸಿಎಂ ಆಗಬೇಕೆಂದು ಅವರು ಬಯಸಿದರು. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಹೀಗೆ ಒಟ್ಟಿಗೇ ಕೆಲಸ ಮಾಡಿದ್ದಾರೆ. ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದು ಬಿಟ್ಟರೆ, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಏನು ಮಾಡಿದ್ದರು? 2008 ಯಡಿಯೂರಪ್ಪ ವಿರುದ್ಧ ಹೋರಾಡಿದ್ದು ಯಾರು? ಯಡಿಯೂರಪ್ಪ ಅವರ ವಿರುದ್ಧ ಹೋರಾಟ ಮಾಡಿದ ನಿಜವಾದ ಹೋರಾಟಗಾರ ಕುಮಾರಸ್ವಾಮಿ. ಸಿದ್ದರಾಮಯ್ಯ ಅಲ್ಲ.

ಜೆಡಿಎಸ್‌ ಅನ್ನು ಮುಗಿಸುವ ಪ್ರಯತ್ನಗಳು ಸಿದ್ದರಾಮಯ್ಯ ಅವರಿಂದ ಆಗುತ್ತಿರುವುದು ಇದೇ ಮೊದಲೇನಲ್ಲ. 2016ರಲ್ಲಿ ರಾಜ್ಯಸಭೆ ಚುನಾವಣೆಗಾಗಿ ಅವರು ನಮ್ಮ 8 ಮಂದಿ ಶಾಸಕರನ್ನು ಸೆಳೆದಿದ್ದರು. 2004ರಲ್ಲಿ ಎಸ್‌ಎಂ ಕೃಷ್ಣ ಅವರೊಂದಿಗೆ ಸೇರಿ ಜೆಡಿಎಸ್‌ ಮುಗಿಸಲು ಪ್ರಯತ್ನಿಸಿದ್ದರು. ಕಾಂಗ್ರೆಸ್‌– ಜೆಡಿಎಸ್‌ ಅಧಿಕಾರದಲ್ಲಿದ್ದಾಗಲೇ ಅಹಿಂದ ಸಮಾವೇಶ ಮಾಡಿದರು. ಅದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಟೀಕೆ ಮಾಡಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಗೊಂಡರು. ಅವರನ್ನು ನಾನು ಮುಖ್ಯಮಂತ್ರಿ ಮಾಡಲಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ನನ್ನ ಮೇಲಿರುವ ಕೋಪ. ಆದರೆ, 2004ರ ಮೈತ್ರಿ ಸರ್ಕಾರದಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಲು ನಾನು ಎಷ್ಟು ಪ್ರಯತ್ನಿಸಿದ್ದೆ ಎಂಬುದನ್ನು ಸಿದ್ದರಾಮಯ್ಯ ಸೋನಿಯಾಗಾಂಧಿ ಬಳಿ ಕೇಳಿ ತಿಳಿದುಕೊಳ್ಳಲಿ. 2004ರ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಸ್‌.ಎಂ ಕೃಷ್ಣ ಸಿಎಂ ಆಗಬೇಕೆಂಬ ಪ್ರಸ್ತಾವವನ್ನು ನಾನು ನಿರಾಕರಿಸಿದ್ದೆ. ಅದೂ ಸಿದ್ದರಾಮಯ್ಯ ಅವರ ಹಿತಕ್ಕಾಗಿ ಎಂಬುದನ್ನು ಅವರು ತಿಳಿಯಲಿ.

ಜೆಡಿಎಸ್‌ ಅನ್ನು ನಾಶ ಮಾಡಬೇಕೆಂಬಸಿದ್ದರಾಮಯ್ಯ ಅವರ ಪ್ರಯತ್ನಗಳು ಕಾಂಗ್ರೆಸ್‌ಗೇ ಮುಳುವಾಗಿವೆ. ಕಾಂಗ್ರೆಸ್‌ ಅನ್ನು 130ರಿಂದ 79ಕ್ಕೆ ಇಳಿಸಿದೆ. ಮಂಡ್ಯ, ಹಾಸನದಲ್ಲಿ ಬಿಜೆಪಿ ಬಲಿಷ್ಠಗೊಳ್ಳಲು ಸಿದ್ದರಾಮಯ್ಯ ಅವರೇ ಕಾರಣ. ಅಲ್ಲೆಲ್ಲ ಅವರು ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದರು. ಹಾಸನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆದ್ದಿತ್ತು. ಇದರ ಹಿಂದೆಯೂ ಸಿದ್ದರಾಮಯ್ಯ ಇದ್ದರು.

ಇಬ್ಬರೂ ಹಿಂದಿನದೆಲ್ಲವನ್ನು ಮರೆಯೋಣ, ಇಬ್ಬರೂ ಜಂಟಿಯಾಗಿ ರಾಜ್ಯ ಪ್ರವಾಸ ಮಾಡೋಣ ಎಂದು ಮೈತ್ರಿ ಸರ್ಕಾರ ರಚನೆಯಾದ ನಂತರ ಸಿದ್ದರಾಮಯ್ಯ ಅವರಲ್ಲಿ ಎರಡು ಬಾರಿ ಖುದ್ದು ನಾನೇ ಮನವಿ ಮಾಡಿದ್ದೆ. ಆದರೆ, ಅವರು ಅದಕ್ಕೆ ಸ್ಪಂದಿಸಲೇ ಇಲ್ಲ.

ಸದ್ಯ ನಾನಂತೂ ಕಾಂಗ್ರೆಸ್‌ನೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ. ಎಚ್‌.ಡಿ ಕುಮಾರಸ್ವಾಮಿ ಅವರೂ ಇಟ್ಟುಕೊಳ್ಳಲಾರರು. ದೇವೇಗೌಡರೊಂದಿಗೆ ಮೈತ್ರಿಮಾಡಿಕೊಂಡಿದ್ದೇ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸ್ಥಳೀಯ ನಾಯಕರು ಸತ್ಯವನ್ನು ಅದುಮಿಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯಗೆ ತನ್ನ ಶಕ್ತಿ ಸಾಬೀತು ಮಾಡಬೇಕಿತ್ತು ಮಾಡಿದ್ದಾರಷ್ಟೇ.

ಮುಂದಿನ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಸೋನಿಯಾಗಾಂಧಿ ಏನಾದರೂ ಮಾತನಾಡಿದರೆ ಮುಂದಿನದ್ದನ್ನು ಆಮೇಲೆ ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.