ADVERTISEMENT

ದರ್ಶನ್‌ಗೆ ₹ 40 ಲಕ್ಷ ನೀಡಿದ್ದ ಮಾಜಿ ಉಪ ಮೇಯರ್‌ ಮೋಹನ್‌ರಾಜ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:11 IST
Last Updated 5 ಜುಲೈ 2024, 16:11 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರಿಗೆ ₹40 ಲಕ್ಷ ನೀಡಿದ್ದ ಆರೋಪದಡಿ, ಪೊಲೀಸರು ಶುಕ್ರವಾರ ಬಿಬಿಎಂಪಿ ಮಾಜಿ ಉಪ ಮೇಯರ್‌ ಮೋಹನ್‌ರಾಜ್ ಅವರ ವಿಚಾರಣೆ ನಡೆಸಿದರು.

‘ಹಣ ನೀಡಿದ್ದ ವಿಷಯ ಗೊತ್ತಾದ ಮೇಲೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿತ್ತು. ಮೋಹನ್‌ ರಾಜ್‌ ಗೈರಾಗಿದ್ದರು. ಮತ್ತೊಮ್ಮೆ ನೋಟಿಸ್‌ ನೀಡಿದ್ದರಿಂದ ಶುಕ್ರವಾರ ವಿಚಾರಣೆಗೆ ಬಂದಿದ್ದರು. ಎಸಿಪಿ ಚಂದನ್‌ ನೇತೃತ್ವದಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಯಿತು’ ಎಂದು ಮೂಲಗಳು ಹೇಳಿವೆ.

‘ಮೋಹನ್‌ ಅವರಿಂದ ಕೆಲವು ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಮೊಬೈಲ್‌ ಪರಿಶೀಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದೇನೆ. ದರ್ಶನ್‌ ಅವರಿಂದ ಪಡೆದಿದ್ದ ₹40 ಲಕ್ಷವನ್ನು ಅವರಿಗೇ ವಾಪಸ್ ನೀಡಿದ್ದೆ’ ಎಂದು ಮೋಹನ್‌ ರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಪ್ರಕರಣದಿಂದ ಬಚಾವಾಗಲು ಸಂಚು ರೂಪಿಸಿದ್ದ ದರ್ಶನ್‌ ಅವರು ಮೋಹನ್‌ರಾಜ್‌ ಅವರಿಂದ ಹಣ ಪಡೆದಿದ್ದು, ನಾಲ್ವರು ಯುವಕರಿಗೆ ಸಂದಾಯ ಮಾಡಿ, ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲು ತಿಳಿಸಿದ್ದರು. ಬಳಿಕ ನಾಲ್ವರು ಪೊಲೀಸರಿಗೆ ಶರಣಾಗಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿತ್ತು. 

2019–2020ರ ಅವಧಿಯಲ್ಲಿ ಮೋಹನ್‌ರಾಜ್‌ ಅವರು ಉಪ ಮೇಯರ್ ಆಗಿದ್ದರು. ಆಗ  ಹಲವು ಕಾರ್ಯಕ್ರಮಗಳಿಗೆ ದರ್ಶನ್‌ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಇಬ್ಬರೂ ಸ್ನೇಹಿತರು. ಮೋಹನ್‌ರಾಜ್‌ ಅವರು ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎಂದು ಮೂಲಗಳು ಹೇಳಿವೆ.

ಮಿಲನ ಪ್ರಕಾಶ್ ವಿಚಾರಣೆ:

ಡೆವಿಲ್ ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್‌ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು. 

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಮಾಹಿತಿ ನೀಡಿದ್ದರೆ? ‘ಡೆವಿಲ್‌’ ಚಿತ್ರೀಕರಣ ಯಾವಾಗ ಆರಂಭವಾಗಿತ್ತು ಎಂದು ಪ್ರಶ್ನಿಸಿ ಹೇಳಿಕೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕಮಿಷನರ್‌ಗೆ ಪತ್ರ:

‘ಪವಿತ್ರಾಗೌಡ ಅವರು ದರ್ಶನ್ ಸ್ನೇಹಿತೆ. ಕಾನೂನು ಪ್ರಕಾರ ದರ್ಶನ್ ನನ್ನ ಪತಿ. ಪೊಲೀಸರ ಕಡತಗಳಲ್ಲಿ ಆಕೆಯನ್ನು ಹೆಂಡತಿ ಎಂಬುದಾಗಿ ನಮೂದಿಸಬಾರದು’ ಎಂದು ವಿಜಯಲಕ್ಷ್ಮಿ ಅವರು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದಾರೆ.

‘ಯಾವ ಪತ್ರವೂ ನನ್ನ ಕೈಸೇರಿಲ್ಲ. ನನ್ನ ಕಚೇರಿಯ ಬೇರೆ ವಿಭಾಗಕ್ಕೆ ಪತ್ರ ಬಂದಿರಬಹುದು’ ಎಂದು ಕಮಿಷನರ್‌ ತಿಳಿಸಿದ್ದಾರೆ. 

ಬಿಜೆಪಿ ಶಾಸಕರ ಆಪ್ತ ಕಾರ್ತಿಕ್‌ಗೆ ನೋಟಿಸ್

‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬರಿಗೆ ಹಣಕಾಸಿನ ಸಹಾಯ ಮಾಡಿರುವ ಆರೋಪದ ಅಡಿ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಹಾಗೂ ಆರೋಪಿ ಪ್ರದೋಷ್ ಆಪ್ತನೂ ಆಗಿರುವ ಕಾರ್ತಿಕ್ ಪುರೋಹಿತ್ ಎಂಬಾತನಿಗೆ ನೋಟಿಸ್ ನೀಡಲಾಗಿದೆ.

ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರ ಕಚೇರಿಯಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಕೃತ್ಯ ಎಸಗಿದ ಬಳಿಕ ಪಟ್ಟಣಗೆರೆಯ ಶೆಡ್‌ಗೆ ಕಾರ್ತಿಕ್‌ ಪುರೋಹಿತ್‌ ಅವರನ್ನು ಪ್ರದೋಷ್‌ ಕರೆಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು. ಕಾರ್ತಿಕ್ ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.