ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
‘ಇದೊಂದು ಅಮಾನವೀಯ ನಡೆಯಾಗಿದೆ. ಭಾರತದ ಪ್ರಜೆಗಳೆಲ್ಲ ಈಗ ಅಂಚಿನಲ್ಲಿರುವವರ ಪರವಾಗಿ ನಿಲ್ಲಬೇಕಾಗಿದೆ’ ಎಂದು ಅವರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
‘ಮಸೂದೆ ಅಂಗೀಕಾರವಾದರೆ, ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಲಿದೆ. ನಾನು ಪೌರತ್ವ ಮಸೂದೆಯನ್ನು ಸ್ವೀಕರಿಸುವುದಿಲ್ಲ, ಭಾರತೀಯನೆಂದು ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದಿಲ್ಲ. ನನ್ನ ಅಸಹಕಾರಕ್ಕಾಗಿ ನನ್ನ ಮೇಲೆ ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಮಸೂದೆಯನ್ನು ಮಂಡಿಸುವ ಮೂಲಕ ಸರ್ಕಾರ ದ್ವೇಷದ ಮೂಲ ಸಿದ್ಧಾಂತವನ್ನು ಬಹಿರಂಗಪಡಿಸಿದೆ. ಒಂದೇ ದೇಶದಲ್ಲಿ ವಾಸವಾಗಿದ್ದ ನಮ್ಮ ಮುಸ್ಲಿಂ ಮತ್ತು ಆದಿವಾಸಿ ಸಹೋದರ ಸಹೋದರಿಯರು ದೇಶದ ಜಾತ್ಯತೀತ ನೀತಿಗಳ ಬಗ್ಗೆ ಭಯ ಪಡುವಂತಾಗಿದೆ. ನಮ್ಮನ್ನು ವಿಭಜಿಸುವ ಪ್ರಯತ್ನದ ವಿರುದ್ದ ಎಲ್ಲ ನಾಗರಿಕರು ಕೈ ಜೋಡಿಸಿ ಹೋರಾಡಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.