ADVERTISEMENT

ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ವಿಜಯಶಂಕರ್ ನೇಮಕ:BSY, HDK ಸೇರಿ ಗಣ್ಯರ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2024, 5:00 IST
Last Updated 28 ಜುಲೈ 2024, 5:00 IST
<div class="paragraphs"><p>ಸಿ.ಎಚ್.​ ವಿಜಯಶಂಕರ್</p></div>

ಸಿ.ಎಚ್.​ ವಿಜಯಶಂಕರ್

   

ಬೆಂಗಳೂರು: ಮೇಘಾಲಯದ ನೂತನ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ ಸಿ.ಎಚ್.​ ವಿಜಯಶಂಕರ್ ನೇಮಕಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿಜಯಶಂಕರ್ ಅವರು 1994ರಿಂದ 1998ರವರೆಗೆ ಮೊದಲ ಬಾರಿಗೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2010ರಿಂದ 2016ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. 2010ರಲ್ಲಿ ಕರ್ನಾಟಕ ಮಂತ್ರಿಮಂಡಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ADVERTISEMENT

ವಿಜಯಶಂಕರ್ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿರುವುದಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಕೋರಿದ್ದಾರೆ.

ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಯಡಿಯೂರಪ್ಪ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಮಾಜಿ ಸಂಸದರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾದ ಸಿ.ಎಚ್.ವಿಜಯಶಂಕರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಸಮಸ್ತ ಕನ್ನಡಿಗರ ಪರವಾಗಿ ವಿಜಯಶಂಕರ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹೆಜ್ಜೆಗಳು ನಿರಂತರವಾಗಿ ಸಾಗಲಿ. ಮೇಘಾಲಯದ ಜನರಿಗೆ ಅವರಿಂದ ಒಳ್ಳೆಯದಾಗಲಿ ಎಂದು ಮನಸಾರೆ ಆಶಿಸುತ್ತೇನೆ’ ಎಂದು ಕುಮಾರಸ್ವಾಮಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಾಜಿ ಸಂಸದರಾದ ಸಿ.ಎಚ್ ವಿಜಯಶಂಕರ್ ಅವರಿಗೆ ಅಭಿನಂದನೆಗಳು. ವಿಜಯಶಂಕರ್ ಅವರ ಸೌಮ್ಯ, ಸಜ್ಜನ ವ್ಯಕ್ತಿತ್ವ ಹಾಗೂ ಪಕ್ಷ ನಿಷ್ಠೆಗೆ ಒಲಿದಿರುವ ಬಹುದೊಡ್ಡ ಗೌರವ ಇದಾಗಿದೆ. ರಾಜ್ಯಪಾಲರಾಗಿ ಸಂವಿಧಾನಿಕ ಶ್ರೇಷ್ಠ ಹುದ್ದೆಯ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ ಎಂಬ ಅಚಲ ವಿಶ್ವಾಸದೊಂದಿಗೆ ಶುಭ ಹಾರೈಸುವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಹಾರಾಷ್ಟ್ರದ ಮಾಜಿ ಸ್ಪೀಕರ್ ಹರಿಭಾವು ಬಾಗಡೆ, ಮಾಜಿ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಒಪಿ ಮಾಥುರ್ ಮತ್ತು ಮೈಸೂರಿನ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಸೇರಿದಂತೆ ಆರು ಮಂದಿ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.