ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿ ಅನುದಾನ ದುರುಪಯೋಗಕ್ಕೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರೇ ಕಾರಣ ಎಂದು ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ರಾಜಕುಮಾರ್ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.
ಒಟ್ಟು 241 ಪುಟಗಳ ಈ ಪಟ್ಟಿಯಲ್ಲಿ, ಪದ್ಮನಾಭ ಅವರ ಮೇಲೆ ಹೊರಿಸಲಾದ ಒಟ್ಟು 11 ಆರೋಪಗಳು, ಅದಕ್ಕೆ ಸಂಬಂಧಿಸಿದ ಸಮಗ್ರ ವಿವರಣೆ, ದಾಖಲೆಗಳು ಮತ್ತು ಸಾಕ್ಷಿಯ ವಿವರ ನೀಡಲಾಗಿದೆ. ಈ ಆರೋಪ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕಿನ ಖಾತೆಯಲ್ಲಿದ್ದ ಸರ್ಕಾರದ ಅನುದಾನವನ್ನು 2024ರ ಮಾರ್ಚ್ 5ರಿಂದ ಮೇ 6ರ ಮಧ್ಯೆ ಅನಾಮಧೇಯ ವ್ಯಕ್ತಿಗಳು ‘ಡ್ರಾ’ ಮಾಡಿಕೊಂಡಿದ್ದರೂ ಗಮನಿಸದಿರು
ವುದು ಪದ್ಮನಾಭ ಅವರ ಕರ್ತವ್ಯಲೋಪ, ನಿರ್ಲಕ್ಷ್ಯ. ಆರ್ಥಿಕ ನಿಯಮಗಳ ಉಲ್ಲಂಘನೆ. ಅನಾಮಧೇಯ ಖಾತೆಗಳಿಗೆ ಹಣ ವರ್ಗಾವಣೆಯಾಗಲು ಪದ್ಮನಾಭ ಕಾರಣ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಎಲ್ಲ ನಿಗಮಗಳು ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿದ್ದ ಹಣವನ್ನು ಪಿ.ಡಿ ಖಾತೆಗೆ ವರ್ಗಾಯಿಸಿ, ಅಲ್ಲಿಂದಲೇ ಆರ್ಥಿಕ ವ್ಯವಹಾರ ನಡೆಸುವಂತೆ ಆರ್ಥಿಕ ಇಲಾಖೆ ಸ್ಪಷ್ಟ ಸೂಚನೆ ನೀಡಿತ್ತು. ಆ ನಿರ್ದೇಶನವನ್ನು ಪದ್ಮನಾಭ ಪಾಲಿಸದಿರುವುದೇ ದೊಡ್ಡ ಮೊತ್ತ ದುರುಪಯೋಗಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ವಸಂತನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ನಿಗಮದ ಎಂ.ಡಿ ಹೆಸರಿ
ನಲ್ಲಿದ್ದ ಖಾತೆಯನ್ನು ಸರ್ಕಾರ ಅಥವಾ ಮಂಡಳಿಯ ಅನುಮೋದನೆ ಪಡೆಯದೆ ಎಂ.ಜಿ ರಸ್ತೆಯ ಶಾಖೆಗೆ ವರ್ಗಾಯಿಸಲು ಶಾಖಾ ವ್ಯವಸ್ಥಾಪಕರಿಗೆ ಪದ್ಮನಾಭ ಅವರು ಏಕಪಕ್ಷೀಯವಾಗಿ ಪತ್ರ ಬರೆದಿರುವುದು ನಿಯಮಬಾಹಿರ. ಆರ್ಥಿಕ ಇಲಾಖೆಯ 2017ರ ಜ. 31ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿರುವ ಮಾರ್ಗಸೂಚಿಯ ಉಲ್ಲಂಘನೆ. ಹೀಗೆ ವರ್ಗಾಯಿಸಿದ ನಂತರ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಯವರ ದೂರವಾಣಿ ಸಂಖ್ಯೆ ಇ–ಮೇಲ್ ಹಾಗೂ ಕೆವೈಸಿ ದತ್ತಾಂಶಗಳನ್ನು ಅಪ್‌ಡೇಟ್ ಮಾಡದೆ ಉದ್ದೇಶಪೂರ್ವವಾಗಿ ತಪ್ಪು ದೂರವಾಣಿ ಸಂಖ್ಯೆ ಮತ್ತು ಇ– ಮೇಲ್ ಅಪ್‌ಡೇಟ್ ಮಾಡಲಾಗಿದೆ. ಆ ಮೂಲಕ, ಪದ್ಮನಾಭ ಪಾರದರ್ಶಕತೆ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ ಎಂದೂ ದೋಷಾರೋಪಣೆಯಲ್ಲಿದೆ.
ಸಿದ್ದಯ್ಯ ರಸ್ತೆ ಮತ್ತು ವಾಣಿವಿಲಾಸ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಗಳಲ್ಲಿ ನಿಗಮದ ಖಾತೆ
ಯಿಂದ ಮತ್ತು ಖಜಾನೆಯಿಂದ ₹187.33 ಕೋಟಿಯನ್ನು ಎಂ.ಜಿ. ರಸ್ತೆಯ ಶಾಖೆಗೆ ವರ್ಗಾಯಿಸಲು ಸರ್ಕಾರ ಮತ್ತು ಮಂಡಳಿಯ ಅನುಮೋದನೆ ಪಡೆದಿಲ್ಲ. ಇದು ಆರ್ಥಿಕ ಇಲಾಖೆ ಅನುಮತಿಸಿದ ವಿತ್ತೀಯ ಮಿತಿಯ ಉಲ್ಲಂಘನೆಯಾಗಿದೆ.
ಇಂಡಿಯನ್ ಬ್ಯಾಂಕ್ ಸಹಯೋಗದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಡಿಬಿಟಿ ತಂತ್ರಜ್ಞಾನ ಸಿದ್ಧಪಡಿಸಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಬ್ಯಾಂಕ್‌ಗೆ ಜಮೆ ಮಾಡಲು ಸೂಚಿಸಲಾಗಿತ್ತು. ಗಂಗಾ ಕಲ್ಯಾಣ ಯೋಜನೆಯಡಿ 3ನೇ ಮತ್ತು 4ನೇ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬೇಕಿದ್ದ ₹43.33 ಕೋಟಿಯನ್ನು ಸರ್ಕಾರದ ನಿರ್ದೇಶನ ಇದ್ದರೂ ನಿಯಮಬಾಹಿರವಾಗಿ ಎಂ.ಜಿ. ರಸ್ತೆಯ ಶಾಖೆಗೆ ವರ್ಗಾವಣೆ ಮಾಡಲಾಗಿದೆ.
ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಿ, ಆರ್ಥಿಕ ವರ್ಷದ ಕೊನೆಯಲ್ಲಿ ವ್ಯವಸ್ಥಿತವಾಗಿ ಲೆಕ್ಕಪತ್ರ ಇಡುವುದು ಮತ್ತು ಉಳಿದ ಅನುದಾನವನ್ನು ಆರ್ಥಿಕ ಇಲಾಖೆಗೆ ಮರಳಿಸುವುದು ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ. ಆ ಕೆಲಸವನ್ನು ಪದ್ಮನಾಭ ಮಾಡಿಲ್ಲ ಎಂದೂ ದೋಷಾರೋಪಣೆ
ಹೊರಿಸಲಾಗಿದೆ.
‘ಅಕ್ರಮ ಗೊತ್ತಿದ್ದೂ ಮರೆಮಾಚಿದ್ದ ಎಂ.ಡಿ’
ಪದ್ಮನಾಭ ಮತ್ತು ಲೆಕ್ಕಾಧಿಕಾರಿಯ ಸಹಿಯಲ್ಲಿ ₹50 ಕೋಟಿ ಒಂದು ವರ್ಷಕ್ಕೆ ನಿಶ್ಚಿತ ಠೇವಣಿ ಮಾಡಲು ಸರ್ಕಾರ ಅಥವಾ ನಿರ್ದೇಶಕರ ಮಂಡಳಿಯ ಅನುಮೋದನೆ ಪಡೆದಿಲ್ಲ. ಸಾಲ ಪಡೆಯಲು ನಿಗಮಕ್ಕೆ ಅವಕಾಶವಿಲ್ಲ. ಆದರೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಯು ₹44.62 ಕೋಟಿಯ ಓವರ್ ಡ್ರಾಫ್ಟ್ (ಓ.ಡಿ) ಪಡೆದಿದ್ದಾರೆ. ಎಂ.ಜಿ ರಸ್ತೆಯ ಶಾಖೆಯಲ್ಲಿ ನಿಗಮದ ಎಸ್.ಬಿ ಖಾತೆಯಲ್ಲಿ ಲಭ್ಯವಿದ್ದ ಮೊತ್ತದಲ್ಲಿ ₹89.63 ಕೋಟಿಯನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಲೆಕ್ಕಾಧಿಕಾರಿಯ ಜಂಟಿ ಸಹಿ ಮಾಡಿದ ಆರ್‌ಟಿಜಿಎಸ್ ಪತ್ರಗಳನ್ನು ಆಧರಿಸಿ 18 ಅನಾಮಧೇಯ ಖಾತೆಗಳಿಗೆ ವರ್ಗಾಯಿಸಲಾಗಿದೆ. ಮೇ 22 ರಂದೇ ಈ ವಿಷಯ ಮತ್ತು ಈ ಮೊತ್ತದಲ್ಲಿ ₹5 ಕೋಟಿಯನ್ನು ನಿಗಮದ ಖಾತೆಗೆ ಯಾವ ವ್ಯಕ್ತಿ, ಯಾವ ಖಾತೆಯಿಂದ ಹಿಂದಿರುಗಿಸಿದ್ದಾರೆಂದು ಗೊತ್ತಿದ್ದೂ ಪದ್ಮನಾಭ ಮರೆ ಮಾಚಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಪತ್ನಿ ಕವಿತಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ‘ನನ್ನ ಗಂಡನ ಮರಣ ಹೇಳಿಕೆಯಲ್ಲಿ, ನಿಗಮದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಮತ್ತು ನನ್ನ ಸಾವಿಗೆ ಜೆ.ಜಿ. ಪದ್ಮನಾಭ ಕಾರಣ’ ಎಂದು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ ಎಂದೂ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘ನ್ಯಾಯ’ ಕೊಡ್ತೇನೆ ಎಂದು ಹಣ ದೋಚಿದಿರಿ’
‘ಚುನಾವಣಾ ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ ‘ನ್ಯಾಯ’ ನೀಡುತ್ತೇವೆ ಎಂದು ನಿಮ್ಮ ಪಕ್ಷದ ನಾಯಕರು ಹೇಳುತ್ತಿದ್ದರು. ಈಗ ವಾಲ್ಮೀಕಿ ಜನರ, ಪರಿಶಿಷ್ಟ ಜನರ ಹಣವನ್ನು ದೋಚಿ ಅವರಿಗೆ ‘ಅನ್ಯಾಯ’ ಮಾಡಿದ್ದೀರಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರ್ಬಳಕೆ ಆಗಿರುವುದು ₹187 ಕೋಟಿಯಲ್ಲ, ₹89 ಕೋಟಿ ಎಂದಿದ್ದೀರಿ. ₹89 ಕೋಟಿ ದೋಚಿದ್ದರೂ ಅದು ಹಗರಣವಲ್ಲವೇ. ಇದನ್ನು ನೀವೇ ಒಪ್ಪಿಕೊಂಡಿದ್ದೀರಿ. ಆದರೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದೀರಿ’ ಎಂದರು.
‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ನನ್ನನ್ನು ಪ್ರಶ್ನಿಸುವ ಅಥವಾ ನನ್ನ ರಾಜೀನಾಮೆ ಕೇಳುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಈ ಹಗರಣದಲ್ಲಿ ನಾವು ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ
ತೆಗೆದುಕೊಂಡಿದ್ದೇವೆ. ಸಿದ್ದರಾಮಯ್ಯ ಸರ್, ನೀವು ಹಣಕಾಸು ಇಲಾಖೆಯ ಮುಖ್ಯಸ್ಥರು. ನೀವು ನ್ಯಾಯಯುತವಾಗಿ ಇದ್ದಿದ್ದೇ ಆಗಿದ್ದರೆ ನೀವೇ ಮೊದಲು ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಬ್ಯಾಂಕಿನ ಅಧಿಕಾರಿಗಳು ನಮ್ಮ ವಾಲ್ಮೀಕಿ ಜನರ ಹಣವನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ನೀವೇ ಹಿಡಿದುಕೊಡಬೇಕಿತ್ತು. ಆಗ ನನ್ನ ರಾಜೀನಾಮೆ ಕೇಳುವ ಹಕ್ಕು ನಿಮಗೆ ಇರುತ್ತಿತ್ತು’ ಎಂದರು.
ಆರೋಪ ಸಮರ್ಥನೆಗೆ ದಾಖಲೆಗಳು
*ಎಂ.ಜಿ. ರಸ್ತೆ ಶಾಖೆಗೆ ಖಾತೆ ಬದಲಿಸುವಂತೆ 2024ರ ಫೆ. 19ರಂದು ಬರೆದ ಪತ್ರ
*ಎಂ.ಜಿ. ರಸ್ತೆ ಶಾಖೆಯಲ್ಲಿರುವ ನಿಗಮದ ಎಸ್.ಬಿ ಖಾತೆಯ ‘ಸ್ಟೇಟ್‌ಮೆಂಟ್’
*ಎಂ.ಜಿ. ರಸ್ತೆ ಶಾಖೆಯವರು ನೀಡಿರುವ ಒ.ಡಿ ಖಾತೆಯ ‘ಸ್ಟೇಟ್‌ಮೆಂಟ್’
*ಹಣ ವರ್ಗಾವಣೆಗೆ ಸಂಬಂಧಿಸಿದ 2023–24ರ ಕಡತ
*₹187.33 ಕೋಟಿ ವರ್ಗಾವಣೆಯಾದ ‘ಸ್ಟೇಟ್‌ಮೆಂಟ್’ಗಳ ವಿವರ
*ಆರೋಪಗಳ ಬಗ್ಗೆ ಸಾಕ್ಷಿ: ಎಸ್.ಎನ್. ಪ್ರಶಾಂತ ಕುಮಾರ್ ನಾಯಕ, ಸಹಾಯಕ ಪ್ರಧಾನ
ವ್ಯವಸ್ಥಾಪಕ–1, ವಾಲ್ಮೀಕಿ ಪರಿಶಿಷ್ಟ ಪಂಡಗಳ ಅಭಿವೃದ್ಧಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.