ADVERTISEMENT

ಪ್ರಜಾಪ್ರಭುತ್ವದಿಂದ ಮಧ್ಯಯುಗದ ಪಾಳೇಗಾರಿಕೆಗೆ ಮರಳುವ ಆತಂಕ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 17:22 IST
Last Updated 24 ಜುಲೈ 2021, 17:22 IST
ಬಿ. ಸೋಮಶೇಖರ್‌
ಬಿ. ಸೋಮಶೇಖರ್‌   

ಬೆಂಗಳೂರು: ‘ಮಠಾಧೀಶರ ಒಂದು ಗುಂಪು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರ ನಿಂತಿರುವ ಪರಿಯನ್ನು ನೋಡಿದರೆ ನಾವು ಪ್ರಜಾಪ್ರಭುತ್ವದಿಂದ ಮಧ್ಯಯುಗದ ಪಾಳೇಗಾರಿಕೆಯ ಕಾಲಕ್ಕೆ ಮರಳುತ್ತಿದ್ದೇವೆಯೆ ಎಂಬ ಆತಂಕ ಮೂಡುತ್ತಿದೆ’ ಎಂದು ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಬಿ. ಸೋಮಶೇಖರ್‌ ಹೇಳಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪ್ರಜಾಪ್ರಭುತ್ವ ಎಂದರೆ ಬಹುಸಂಖ್ಯಾತರ ಆಡಳಿತ. ಆದರೆ, ಮಠಾಧೀಶರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ತಾವು ಒಂದು ಜಾತಿ, ಕೋಮು ಅಥವಾ ವ್ಯಕ್ತಿಗೆ ಸೀಮಿತವಾದ ಗುರುಗಳಲ್ಲ, ಎಲ್ಲ ಜನರಿಗೂ ಮಾರ್ಗದರ್ಶಕರು ಎಂಬುದನ್ನಾದರೂ ಈ ಸ್ವಾಮೀಜಿಗಳು ತಿಳಿಯಬೇಕು’ ಎಂದಿದ್ದಾರೆ.

ವಿಶೇಷವಾಗಿ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಮುರುಘಾ ಮಠದ ಶಿವಮೂರ್ತಿ ಶರಣರು ತಾವು ಪ್ರಗತಿಪರರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈಗ ಯಡಿಯೂರಪ್ಪ ಅವರ ಪರ ನಿಲ್ಲುವ ಮೂಲಕ ಪ್ರಗತಿ ವಿರೋಧಿಗಳಂತೆ ಕಾಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಾಜಿ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್‌. ಪಟೇಲ್‌ ಕೂಡ ಲಿಂಗಾಯತ ಸಮುದಾಯದವರು. ಅವರೆಲ್ಲ ಎಂದೂ ಯಡಿಯೂರಪ್ಪ ಅವರಂತೆ ತಮ್ಮ ರಾಜಕೀಯ ಭದ್ರತೆಗಾಗಿ ಯಾವುದೇ ಸ್ವಾಮೀಜಿಯನ್ನು ಬಳಸಿಕೊಳ್ಳಲಿಲ್ಲ. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬದ ಸದಸ್ಯರು ಇಲಾಖೆಯ ಕೆಲಸ ಮಾಡಿಸಿಕೊಳ್ಳಲು ಆಗ ಸಚಿವನಾಗಿದ್ದ ನನ್ನ ಬಳಿ ಬರುತ್ತಿದ್ದರು. ಈಗ ಮಂತ್ರಿಗಳೇ ಮುಖ್ಯಮಂತ್ರಿಯವರ ಮಗನ ಬಳಿ ಹೋಗಬೇಕಾದ ಸ್ಥಿತಿ ಇದೆ. ಇಂತಹ ರಾಜಕೀಯ ವ್ಯವಸ್ಥೆಗೆ ಸ್ವಾಮೀಜಿಗಳು ಬೆಂಬಲ ನೀಡುತ್ತಿದ್ದಾರೆ’ ಎಂದು ಸೋಮಶೇಖರ್‌ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.