ADVERTISEMENT

ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 10:18 IST
Last Updated 30 ಆಗಸ್ಟ್ 2024, 10:18 IST
<div class="paragraphs"><p>ಕೆ.ಎಚ್‌.ಶ್ರೀನಿವಾಸ್</p></div>

ಕೆ.ಎಚ್‌.ಶ್ರೀನಿವಾಸ್

   

ಬೆಂಗಳೂರು: ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್ (86) ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು.

ಪತ್ನಿ ಶಾಲಿನಿ ಶ್ರೀನಿವಾಸ್, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅವರು ಅಗಲಿದ್ದಾರೆ.

ADVERTISEMENT

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ 1938ರ ಫೆಬ್ರವರಿ 5ರಂದು ಜನಿಸಿದರು. ಶ್ರೀನಿವಾಸ್ ಅವರು 1967ರಲ್ಲಿ ಸಾಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಆಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಆ ಚುನಾವಣೆಯಲ್ಲಿ ಅವರು ಕಾಗೋಡು ತಿಮ್ಮಪ್ಪ ಅವರನ್ನು 700 ಮತಗಳಿಂದ ಪರಾಭವಗೊಳಿಸಿದ್ದರು. 1978ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದರು. ಅರಸು ಸಂಪುಟದಲ್ಲಿ ಇಂಧನ, ವಾರ್ತಾ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

1985ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪುನರಾಯ್ಕೆಯಾದರು. 1989 ಮತ್ತು 1994ರ ಚುನಾವಣೆಗಳಲ್ಲಿ ಸೋತರು. 1996ರಲ್ಲಿ ಜೆಡಿಎಸ್‌ ಸೇರಿದರು. 1998- 2004 ಅವಧಿಗೆ ವಿಧಾನಪರಿಷತ್‌ ಸದಸ್ಯರಾಗಿದ್ದರು. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ಜೆಡಿಎಸ್‌ ತೊರೆದು ಅವರು ಬಿಜೆಪಿ ಸೇರಿದರು. ಅಲ್ಲಿ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರು. ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಆ ಪಕ್ಷವನ್ನು ಸೇರಿದರು. ಕೆಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದರು. 2004ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದರು.

ಕುವೆಂಪು ಮತ್ತು ಶಾಂತವೇರಿ ಗೋಪಾಲಗೌಡ ಅವರ ಪ್ರಭಾವಕ್ಕೆ ಒಳಗಾಗಿದ್ದ ಶ್ರೀನಿವಾಸ್, ಯು.ಆರ್‌.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅವರ ಒಡನಾಡಿಯೂ ಆಗಿದ್ದರು. ಕವಿಯೂ ಆಗಿದ್ದ ಅವರು ಕಾನುಗೋಡು ಮನೆ, ಚಂದ್ರ ನೀನೊಬ್ಬನೆ, ಒಳಸೊನ್ನೆ ಹೊರಸೊನ್ನೆ, ಗುಬ್ಬಚ್ಚಿಯ ಗೂಡು ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಉತ್ತಮ ಸಂಸದೀಯ ಪಟವೂ ಆಗಿದ್ದರು. 

ಶಿಕ್ಷಣ ಕ್ಷೇತ್ರಕ್ಕೂ ಅವರು ಕೊಡುಗೆ ನೀಡಿದ್ದರು. ಸಾಗರ ವಿದ್ಯಾವರ್ಧಕ ಸಂಘದ ಮೊದಲ ಕಾರ್ಯದರ್ಶಿಯಾಗಿದ್ದರು. ಈ ಸಂಘವು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನವಾಗಿ ಬದಲಾಯಿತು. ಕೆಲ ಕಾಲ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸ್, ಬಳಿಕ ಅಧ್ಯಕ್ಷರಾಗಿದ್ದರು. ಸಾಗರದ ಲಾಲ್‌ಬಹದ್ದೂರ್ ಕಾಲೇಜು ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.