ಬೆಂಗಳೂರು: ‘ಕೆಎಎಸ್ 40 ಹುದ್ದೆಗಳೂ ಸೇರಿ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ಕೆಲಸ ದಿನವಾದ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿರುವುದು ಸಮಂಜಸವಲ್ಲ. ಈ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳ ಅವಧಿಗೆ ಮುಂದೂಡಬೇಕು. ಅಲ್ಲದೆ, ಭಾನುವಾರದಂದೇ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಪತ್ರ ಬರೆದಿದ್ದಾರೆ.
‘ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಳಂಬ ಧೋರಣೆ ಅನುಸರಿಸುವ ಕೆಪಿಎಸ್‌ಸಿ, ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ನಡೆಸಲು ತೋರಿಸುತ್ತಿರುವ ಅವಸರ ಅನುಮಾನಗಳಿಗೆ ಎಡೆ ಮಾಡಿಕೊಡುವಂತಿದೆ. ಪರೀಕ್ಷೆ ಪಾರದರ್ಶಕವಾಗಿ ನಡೆಯಬೇಕು ಎನ್ನುವುದು ಎಲ್ಲ ಅಭ್ಯರ್ಥಿಗಳ ಅಪೇಕ್ಷೆ. ಈ ಪೂರ್ವಭಾವಿ ಪರೀಕ್ಷೆಯು ಅನೇಕ ನಿರುದ್ಯೋಗಿಗಳ ಜೀವನ್ಮರಣದ ಪ್ರಶ್ನೆ. ಹೀಗಾಗಿ, ಕಾಲಾವಕಾಶ ನೀಡಬೇಕಿರುವುದು ಸಹಜ ನ್ಯಾಯ’ ಎಂದೂ ಪತ್ರದಲ್ಲಿ ಅವರು ಪ್ರತಿಪಾದಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯರ ಹಿತ ಕಾಪಾಡಲು ಪರೀಕ್ಷೆ– ಆರೋಪ: ‘ಕೆಲಸ ದಿನದಂದು ಪೂರ್ವಭಾವಿ ಪರೀಕ್ಷೆ ನಿಗದಿಪಡಿಸಿ, ಪರೀಕ್ಷೆ ನಡೆಯುವ ಕೇಂದ್ರಗಳು ಮತ್ತು ಪರೀಕ್ಷೆ ಬರೆಯಲಿರುವ ಸರ್ಕಾರಿ ಸೇವಾನಿರತರಿಗೆ ಸಾಂದರ್ಭಿಕ ರಜೆ ನೀಡುವಂತೆ ಡಿಪಿಎಆರ್‌ಗೆ ಕೆಪಿಎಸ್‌ಸಿ ಮನವಿ ಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಕೇಂದ್ರ, ರಾಜ್ಯ ಸರ್ಕಾರ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇದರಿಂದ ಅನ್ಯಾಯವಾಗಲಿದೆ. ಕೆಪಿಎಸ್‌ಸಿಯ ಕೆಲವು ಸದಸ್ಯರು ವರ್ಷದೊಳಗೆ ನಿವೃತ್ತರಾಗಲಿದ್ದು, ಆ ಸದಸ್ಯರ ಹಿತಾಸಕ್ತಿ ಕಾಪಾಡಲು ಮತ್ತು ಭ್ರಷ್ಟಾಚಾರದ ಮೂಲಕ ಸ್ವಲಾಭ ಮಾಡಿಕೊಡುವ ಉದ್ದೇಶದಿಂದ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಮುಂದಾಗಿದೆ’ ಎಂದು ಆರೋಪಿಸಿರುವ ಕೆಲವು ಅಭ್ಯರ್ಥಿಗಳು, ಪರೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.