ADVERTISEMENT

ಡಿಸಿಎಂ ವಿಚಾರ | ಎಲ್ಲ ಸಮುದಾಯದವರನ್ನೂ ಮಾಡಲಿ, ಬೇಡ ಅಂದವರು ಯಾರು: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 10:54 IST
Last Updated 24 ಜೂನ್ 2024, 10:54 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಬೆಂಗಳೂರು: ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂಬ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು, ಮುಖಂಡರು ಭಿನ್ನ ಧ್ವನಿ ಎತ್ತಲು ‌ಆರಂಭಿಸಿದ್ದಾರೆ.

ಲೋಕಸಭೆ ಚುನಾವಣೆಗೂ ಮೊದಲು ತೀವ್ರ ಚರ್ಚೆಯಲ್ಲಿದ್ದ ಈ ವಿಚಾರ, ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರವೇಶದ ಬಳಿಕ ತಣ್ಣಗಾಗಿತ್ತು. ಚುನಾವಣೆ ಮುಗಿದ ಬೆನ್ನಲ್ಲೆ ಕೆಲವು ಸಚಿವರು ಮತ್ತೆ ಈ ವಿಷಯವನ್ನು ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಹೆಚ್ಚು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಸಚಿವರಾದ ಜಮೀರ್ ಅಹಮದ್ ಖಾನ್, ಸತೀಶ ಜಾರಕಿಹೊಳಿ, ಕೆ.ಎನ್. ರಾಜಣ್ಣ ಪ್ರತಿಪಾದಿಸುತ್ತಿದ್ದಾರೆ.

ADVERTISEMENT

ಇದೇ ವಿಚಾರವಾಗಿ ಸೋಮವಾರ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ‘ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರಿಂದ ಎಲ್ಲವೂ ಆಗುತ್ತದೆ ಎಂದಾದರೆ ಮುಖ್ಯಮಂತ್ರಿಯನ್ನು ಬಿಟ್ಟು‌ ಇಡೀ ಸಚಿವ ಸಂಪುಟ ಉಪ ಮುಖ್ಯಮಂತ್ರಿ ಆಗಲಿ. ಹಾಗೆ ಹೇಳಿದರೆ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆ‌ ಬಗ್ಗೆ ಪ್ರತಿಕ್ರಿಯಿಸಿದರು. ‘ಅದು ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳಲು ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ. ಯಾರೂ ಬೇಡ ಅಂದಿಲ್ಲ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ತಕ್ಕಂತೆ ಸೀಟುಗಳು ಬಂದಿಲ್ಲ. ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಹುದ್ದೆಯನ್ನೇ ಕೇಳಿ. ಯಾರು ಬೇಡ ಅಂದವರು. ಆದರೆ, ಈ ವಿಚಾರವನ್ನು ನಿಮ್ಮ‌ (ಮಾಧ್ಯಮ) ಬಳಿ ಹೇಳಿದರೆ ಆಗುತ್ತದೆಯೇ’ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಸಂಸದ ಡಿ.ಕೆ. ಸುರೇಶ್‌, ‘ಎಲ್ಲ ಸಮುದಾಯದವರನ್ನೂ ಉಪ ಮುಖ್ಯಮಂತ್ರಿ ಮಾಡಲಿ. ಯಾರು ಬೇಡ ಅಂದವರು’ ಎಂದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಿ ಇನ್ನೂ ಐವರನ್ನು ಉಪ ಮುಖ್ಯಮಂತ್ರಿ ಮಾಡಿದರೂ ಒಳ್ಳೆಯದೇ’ ಎಂದರು.

‘ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ ಜಾರಕಿಹೊಳಿ, ಜಮೀರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್,  ಆರ್.ವಿ. ದೇಶಪಾಂಡೆ ಇದ್ದಾರೆ. ಎಲ್ಲರನ್ನೂ ಉಪ ಮುಖ್ಯಮಂತ್ರಿ ಮಾಡಲಿ. ಯಾರು ಬೇಡ ಅಂದರು’ ಎಂದು ವ್ಯಂಗ್ಯವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.