ADVERTISEMENT

ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆ: ಬೀಳ್ಕೊಡುಗೆ ಸಮಾರಂಭದಲ್ಲಿ ಕಮಲ್ ಪಂತ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 14:40 IST
Last Updated 29 ಜೂನ್ 2024, 14:40 IST
ಸೇವೆಯಿಂದ ನಿವೃತ್ತರಾದ ಕಮಲ್‌ ಪಂತ್‌ (ಎಡದಿಂದ ಮೂರನೆಯವರು) ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ (ಎಡದಿಂದ ಎರಡನೆಯರು) ಅವರು ಸ್ಮರಣಿಕೆ ನೀಡಿ ಗೌರವಿಸಿದರು.     
ಸೇವೆಯಿಂದ ನಿವೃತ್ತರಾದ ಕಮಲ್‌ ಪಂತ್‌ (ಎಡದಿಂದ ಮೂರನೆಯವರು) ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ (ಎಡದಿಂದ ಎರಡನೆಯರು) ಅವರು ಸ್ಮರಣಿಕೆ ನೀಡಿ ಗೌರವಿಸಿದರು.        

ಬೆಂಗಳೂರು: ‘ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆಯಿದ್ದು, ಇಲಾಖೆಯಲ್ಲಿ ಸೌಜನ್ಯವಿದೆ. ಇಂತಹ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ’ ಎಂದು ನಿವೃತ್ತರಾದ ರಾಜ್ಯ ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ ಪಂತ್‌ ಅವರು ಅಭಿಪ್ರಾಯಪಟ್ಟರು.

ನಗರದ ಕೋರಮಂಗಲದ ಕೆಎಸ್ಆರ್‌ಪಿ ಪರೇಡ್‌ ಮೈದಾನದಲ್ಲಿ ಶನಿವಾರ ನಡೆದ ವಿಶೇಷ ಕವಾಯತು ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೇರೆ ರಾಜ್ಯಗಳ ಪೊಲೀಸ್‌ ಇಲಾಖೆಯನ್ನೂ ನಾನು ಹತ್ತಿರದಿಂದ ಗಮನಿಸಿದ್ದೇನೆ. ಇಲ್ಲಿರುವಷ್ಟು ಉತ್ತಮ ವ್ಯವಸ್ಥೆ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. 1990ರ ಸಂದರ್ಭದಲ್ಲಿ ಬೇರೆ ರೀತಿಯ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿತ್ತು. ಈಗ ಬೇರೆ ಸಮಸ್ಯೆ, ಸವಾಲುಗಳಿವೆ. ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಮಲೆನಾಡು, ಕರಾವಳಿ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸಿಬಿಐನಲ್ಲೂ ಕೆಲಕಾಲ ಸೇವೆ ಮಾಡಿದ್ದೇನೆ. ಜನರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಕರ್ನಾಟಕದ ರಾಜ್ಯ ಕೇಡರ್ ಅಧಿಕಾರಿ ಆಗಿ ಆಯ್ಕೆಯಾದ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿ ಅರಿವು ಇರಲಿಲ್ಲ. ಆರಂಭದಲ್ಲಿ ಸಂಕೋಚ ಇತ್ತು. ಹಿಂದಿ ಭಾಷಿಕ ರಾಜ್ಯದಿಂದ ಬಂದವನು ನಾನು. ಆರಂಭದಲ್ಲಿ ಕನ್ನಡ ಗೊತ್ತಿರಲಿಲ್ಲ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಬಳಿಕ ಕನ್ನಡವನ್ನೂ ಕಲಿತೆ. ರಾಜ್ಯದ ಸಮಸ್ಯೆ ಹಾಗೂ ವಿಚಾರಗಳನ್ನೂ ತಿಳಿಯಲು ಸಾಧ್ಯವಾಯಿತು’ ಎಂದು ಹೇಳಿದರು.

‘ಪ್ರಸ್ತುತ ಪೊಲೀಸ್ ಇಲಾಖೆ ಸದೃಢವಾಗಿದೆ. ಯಾವುದೇ ಸಂದರ್ಭ ಎದುರಾದರೂ ಸಮರ್ಥವಾಗಿ ನಿಭಾಯಿಸುತ್ತಿದೆ. ಕೆಎಸ್‌ಆರ್‌ಪಿ ತುಕಡಿಗಳು ಹೆಚ್ಚಾಗಿವೆ. ಪೊಲೀಸ್ ಇಲಾಖೆಗೆ ಸಂದರ್ಭಕ್ಕೆ ಅನುಗುಣವಾಗಿ ಸವಾಲುಗಳು ಎದುರಾಗುತ್ತವೆ. ಕೆಳಹಂತದ ಸಿಬ್ಬಂದಿಯಿಂದ ಮೇಲಿನ ಅಧಿಕಾರಿಗಳ ವರೆಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಪ್ರತಿಯೊಬ್ಬರಿಗೆ ಒಂದು ಸಿದ್ಧಾಂತ ಇರುತ್ತದೆ. ನ್ಯಾಯವನ್ನು ಎತ್ತಿ ಹಿಡಿಯುವ ಸಿದ್ಧಾಂತದ ಅಡಿ ನಾನು ಕೆಲಸ ಮಾಡಿದ್ದೇನೆ. ಯಾವಾಗಲೂ ನ್ಯಾಯವನ್ನು ಕಾಪಾಡಬೇಕು’ ಎಂದು ಸಲಹೆ ಹೇಳಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.