ADVERTISEMENT

ತಾಲಿಬಾನ್‌ ಬಗ್ಗೆ ಭಾರತದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಏನಂದ್ರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 14:59 IST
Last Updated 22 ಆಗಸ್ಟ್ 2021, 14:59 IST
ಎಚ್‌ಡಿ ದೇವೇಗೌಡ
ಎಚ್‌ಡಿ ದೇವೇಗೌಡ   

ಬೆಂಗಳೂರು: ‘ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್ ಕರೆಸಿಕೊಂಡರೆ ಮುಂದೆ ಏನಾಗುತ್ತದೆ ಎಂಬುದನ್ನು ಪರಾಮರ್ಶೆ ಮಾಡಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಸೇನೆ ವಾಪಸ್ ಪಡೆಯಬೇಕಿತ್ತು. ಟ್ರಂಪ್ ಮತ್ತು ಬೈಡನ್ ನಡುವೆ ವ್ಯತ್ಯಾಸ ಇದೆ. ಬೈಡನ್ ಅವರು ದಿಢೀರ್ ನಿರ್ಧಾರ ಮಾಡಿದ್ದು ತಾಲಿಬಾನ್‌ನ ಇಂದಿನ ಆಟಾಟೋಪಕ್ಕೆ ಕಾರಣ‘ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

‘ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡೋಲ್ಲ. ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ ತಾಲಿಬಾನ್ ಪರ ಇದೆ ಎಂದುಹೇಳುತ್ತಾರೆ, ಮುಂದೆನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು‘ ಎಂದು ಭಾನುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

‘ನನ್ನ ಕಾಲದಲ್ಲಿ ಅಫ್ಘಾನಿಸ್ತಾನದ ಅಂದಿನ ಪ್ರಧಾನಿಯನ್ನ ತಾಲಿಬಾನಿಗಳು ಓಡಿಸೇ ಬಿಟ್ಟಿದ್ದರು. ಬಿನ್ ಲಾಡೆನ್‌ನನ್ನ ಒಬಾಮಾ ಸರ್ಕಾರ ಹೊಡೆದು ಹಾಕಿತ್ತು. ಆದಾದ ಬಳಿಕ ಅಮೆರಿಕ ಸೇನೆ ಅಲ್ಲಿ ನೆಲೆಸಿತ್ತು. ತಾಲಿಬಾನ್ ಅಲ್ಲಲ್ಲಿ ಇದ್ದರು. ಅಮೇರಿಕಾ ಸೇನೆ ವಾಪಸ್ ಕರೆಸಿದಾಗ ತಾಲಿಬಾನ್ ಮತ್ತೆ ಆಟಾಟೋಪ ಶುರು ಮಾಡಿದ್ದಾರೆ ಅನ್ನಿಸುತ್ತೆ . ಇವೆಲ್ಲ ಅಂತಾರಾಷ್ಟ್ರೀಯ ವಿಚಾರಗಳು. ವಿಶ್ವ ಸಂಸ್ಥೆ ಕೂಡಾ ತಾಲಿಬಾನ್ ವಿರುದ್ದ ಪ್ರಬಲವಾಗಿ ವಿರೋಧ ಮಾಡಿದೆ‘ ಎಂದು ಹೇಳಿದರು.

ADVERTISEMENT

'ಅನೇಕ‌ ಮಹತ್ವದ ವಿಚಾರಗಳಿದ್ದರೂ ಸಂಸತ್ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ.‌ ಮುಂದಿನ ಚಳಿಗಾಲದ ಅಧಿವೇಶನದವರೆಗೂ ನಾನು ಕಾಯುತ್ತಾ ಕೂರುವುದಿಲ್ಲ. ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇನೆ' ಎಂದೂ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳನ್ನು ಕರ್ನಾಟಕದ ಪರವಾಗಿ ರೂಪಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಜ್ಯದಾದ್ಯಂತ ಪಾದಯಾತ್ರೆ ನಡೆಯಲಿದೆ.‌

'ನದಿ ಯೋಜನೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ.‌ ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದಾದ್ಯಂತ ಪಾದಯಾತ್ರೆ ನಡೆಯಲಿದೆ' ಎಂದು ಹೇಳಿದರು.

'ಪಕ್ಷದ ಸ್ಥಳೀಯ ಮುಖಂಡರು ಒಂದೊಂದು‌ ತಂಡವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾವೇಶಗಳಲ್ಲಿ ನಾನು ಪಾಲ್ಗೊಳ್ಳುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.