ADVERTISEMENT

ಮಾನವ ಹಕ್ಕು ಪರ ದನಿ ದೇಶದ್ರೋಹವಲ್ಲ: ಶಿವರಾಜ ಪಾಟೀಲ

80ರ ಸಂಭ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ವಿಶೇಷ
Published 11 ಜನವರಿ 2020, 4:06 IST
Last Updated 11 ಜನವರಿ 2020, 4:06 IST
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ   

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಶಿವರಾಜ ವಿ. ಪಾಟೀಲ ಅವರಿಗೆ ಈಗ 80ರ ಸಂಭ್ರಮ. ಈ ಗಳಿಗೆಯನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಅವರ ಹಿತೈಷಿಗಳು ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ. ಎಂಟು ದಶಕಗಳನ್ನು ಕಂಡ ಪಾಟೀಲ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದವರು ನೀವು. ಮಾನವ ಹಕ್ಕುಗಳ ಪರ ಮಾತನಾಡುವುದನ್ನು ‘ದೇಶದ್ರೋಹ’ ಎಂದು ಮೂದಲಿಸುವ ಧೋರಣೆ ಕಾಣಿಸುತ್ತಿದೆ. ಇದು ಎಷ್ಟು ಸರಿ?

ಕಾನೂನಿನ ಚೌಕಟ್ಟಿನಲ್ಲಿ ಮಾನವ ಹಕ್ಕುಗಳ ಪರವಾಗಿ ದನಿ ಎತ್ತುವವರು, ಹೋರಾಟ ನಡೆಸುವವರು ದೇಶದ್ರೋಹಿಗಳಲ್ಲ. ಖಂಡಿತವಾಗಿಯೂ ಅಲ್ಲ. ಆದರೆ, ಮಾನವ ಹಕ್ಕುಗಳ ಹೆಸರಿನಲ್ಲಿ ದೇಶದ್ರೋಹ ಮಾಡುವವರು ಇದ್ದರೆ? ಸರ್ಕಾರದ ವಿರುದ್ಧ ಮಾತನಾಡಿದ್ದಾರೆ ಎಂದಮಾತ್ರಕ್ಕೆ ಅದನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ದೇಶದ್ರೋಹ’ ಎನ್ನಲಾಗದು. ವ್ಯಕ್ತಿ ಅಥವಾ ಗುಂಪು ಮಾನವ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಮಾತನಾಡಿದೆಯೋ ಅಥವಾ ಅದನ್ನು ಸಲಕರಣೆಯಂತೆ ದೇಶದ್ರೋಹದ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆಯೋ ಎಂಬುದನ್ನು ಗುರುತಿಸಬೇಕು. ಇವನ್ನೆಲ್ಲ ಸರಳೀಕರಿಸಿ ಹೇಳಲಾಗುವುದಿಲ್ಲ.

ADVERTISEMENT

ಮಾನವ ಹಕ್ಕುಗಳ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅರಿವಿಲ್ಲ. ಬಿಹಾರದ ಒಂದು ಜೈಲಿನಲ್ಲಿ ಕಾಲು ಚಾಚಲೂ ಜಾಗವಿಲ್ಲದ ಕೋಣೆಯಲ್ಲಿ ಕೈದಿಗಳನ್ನು ಮಲಗಿಸುತ್ತಿದ್ದದ್ದನ್ನು ನಾನು ನೋಡಿದ್ದೇನೆ.

* ನ್ಯಾಯಮೂರ್ತಿಗಳ ನೇಮಕಕ್ಕೆ ಈಗಿನ ಕೊಲಿಜಿಯಂ ವ್ಯವಸ್ಥೆ ಸರಿಯೇ? ಅಥವಾ ಪರ್ಯಾಯ ವ್ಯವಸ್ಥೆ ಬೇಕೋ?

ನ್ಯಾಯಮೂರ್ತಿ ಸ್ಥಾನಕ್ಕೆ ಕೊಲಿಜಿಯಂ ಶಿಫಾರಸು ಮಾಡುವ ಹೆಸರುಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ವಿಚಾರದಲ್ಲಿ ಸರ್ಕಾರದಿಂದ ವಿಳಂಬ ಆಗಬಾರದು. ಕೊಲಿಜಿಯಂ ವ್ಯವಸ್ಥೆ 1993ರಿಂದಲೂ ಕೆಲಸ ಮಾಡುತ್ತಿದೆ. ಮನುಷ್ಯ ಇರುವ ಯಾವ ವ್ಯವಸ್ಥೆಯೂ ಪರಿಪೂರ್ಣ ಆಗುವುದಿಲ್ಲ. ಏಕೆಂದರೆ ಎಲ್ಲ ಮನುಷ್ಯರೂ ಅಪರಿಪೂರ್ಣರೇ, ದೇವರು ಮಾತ್ರ ಪರಿಪೂರ್ಣ ಎಂಬ ಮಾತಿದೆ. ಅಂದಮಾತ್ರಕ್ಕೆ ಕೊಲಿಜಿಯಂ ವ್ಯವಸ್ಥೆಯೇ ಬೇಡ ಎನ್ನಲಾಗದು. ಇದರಲ್ಲಿ ಸುಧಾರಣೆ ತರುವ ಬಗ್ಗೆ ಆಲೋಚಿಸಬಹುದು.

* ಇಂದಿನ ಆಡಳಿತ ವ್ಯವಸ್ಥೆಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆಯೇ? ಧಕ್ಕೆ ತರುವ ಅಪಾಯ ಇದೆಯೇ?

ಸದ್ಯದ ಆಡಳಿತ ವ್ಯವಸ್ಥೆಯಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಹುದು ಎಂಬ ಅನುಮಾನ ಸಮಾಜದ ಒಂದು ವರ್ಗದಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಮೂಡುತ್ತಿದೆ. ಈ ಅನುಮಾನ ಮೂಡುವುದಕ್ಕೆ ಕಾರಣಗಳು ಏನೂ ಇರಬಹುದು. ಇದು ಅಪಪ್ರಚಾರವೂ ಇದ್ದಿರಬಹುದು. ಆದರೆ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇಂದಿನ ಆಡಳಿತ ವ್ಯವಸ್ಥೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು ಎಂದು ನಾನು ಹೇಳಲಾರೆ.

* ನ್ಯಾಯಮೂರ್ತಿಯಾಗಿ ನೀಡಿದ ಅತ್ಯಂತ ಪ್ರೀತಿಯ ಆದೇಶಗಳು ಯಾವುವು?

ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿದ ತೀರ್ಪುಗಳು ಬಹಳ ಖುಷಿಕೊಡುತ್ತವೆ. ನಾನು ಮದ್ರಾಸ್‌ ಹೈಕೋರ್ಟ್‌ನಲ್ಲಿದ್ದಾಗ ಶಾಂತಾಲಕ್ಷ್ಮಿ ಎನ್ನುವವರ ಪ್ರಕರಣ ನನ್ನ ಮುಂದೆ ಬಂತು. ಆಕೆ ವೈದ್ಯಕೀಯ ಸೀಟ್‌ಗೆ ಅರ್ಜಿ ಸಲ್ಲಿಸಿದ್ದರು. ಎರಡು ಸೀಟುಗಳನ್ನು ಪರಿತ್ಯಕ್ತ ಹೆಣ್ಣುಮಕ್ಕಳಿಗೆ ಮೀಸಲಿಡಬೇಕು ಎಂಬ ನಿಯಮ ತಮಿಳುನಾಡಿನಲ್ಲಿತ್ತು. ಆದರೆ, ಈಕೆಯ ಬಳಿ ‘ಪರಿತ್ಯಕ್ತೆ’ ಎಂಬ ಪ್ರಮಾಣಪತ್ರ ಇರಲಿಲ್ಲ. ಈಕೆಗೆ ನಂತರ ವಿಚ್ಛೇದನವೂ ಆಗಿತ್ತು. ಹಾಗಾಗಿ ಸೀಟು ಕೋರಿ ಈಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆಕೆ ‘ಪರಿತ್ಯಕ್ತೆ’ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರೂ ತಹಶೀಲ್ದಾರ್ ಇಲ್ಲದ ಕಾರಣ ಅದು ಸಿಕ್ಕಿರಲಿಲ್ಲ. ಆದರೆ, ನಾನು ಈ ಮೀಸಲಾತಿ ಕಲ್ಪಿಸಿದ್ದರ ಹಿಂದಿನ ಉದ್ದೇಶ ಗಮನಿಸಿ, ಇವರಿಗೆ ಸೀಟು ಕೊಡಬೇಕು ಎಂದು ಆದೇಶಿಸಿದೆ. ಇದು ವಿಭಾಗೀಯ ಪೀಠದ ಮುಂದೆ ಹೋಯಿತು. ಅಲ್ಲಿ, ನನ್ನ ಆದೇಶ ಅಸಿಂಧುವಾಯಿತು. ನಂತರ ಆ ಹೆಣ್ಣುಮಗಳು ಸುಪ್ರೀಂ ಕೋರ್ಟ್‌ ಮೊರೆ ಹೋದರು. ಅಲ್ಲಿ, ಪುನಃ ಆಕೆಗೆ ಸೀಟು ಕೊಡಬೇಕು ಎಂದು ತೀರ್ಮಾನವಾಯಿತು. ಈಗ ಆಕೆ ವೈದ್ಯೆಯಾಗಿ ವೃತ್ತಿಯಲ್ಲಿ ಮೇಲೆ ಬಂದಿದ್ದಾಳೆ ಎಂಬ ಮಾಹಿತಿ ಇದೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಮಧುಮೇಹದ ಕಾರಣದಿಂದ ಕಾಲು ಕಳೆದುಕೊಂಡರು. ಆಗ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಯಿತು. ಅವರಿಗೆ ಪೆನ್ಷನ್ ಮಾತ್ರ ಸಿಗುತ್ತಿತ್ತು. ಈ ಪ್ರಕರಣ ನನ್ನ ಮುಂದೆ (ವಿಭಾಗೀಯ ಪೀಠ) ಬಂತು. ಅವರ ಸೇವೆಯನ್ನು ಮುಂದುವರಿಸಬೇಕು, ಕೂತಲ್ಲೇ ಮಾಡಬಹುದಾದ ಕೆಲಸ ಕೊಡಬೇಕು. ಅವರನ್ನು ನಿವೃತ್ತಿಯವರೆಗೆ ಸೇವೆಯಲ್ಲಿ ಇಟ್ಟುಕೊಳ್ಳಬೇಕು ಎಂದು ತೀರ್ಪು ಕೊಟ್ಟೆವು. ಆ ತೀರ್ಪು ಇಂತಹ ತೊಂದರೆಯಲ್ಲಿರುವ ಎಲ್ಲರಿಗೂ ನೆರವಿಗೆ ಬಂತು.

* ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಪ್ರದೇಶವೊಂದರಲ್ಲಿ ಜನಿಸಿ, ಇಷ್ಟು ದೊಡ್ಡ ಮಟ್ಟವನ್ನು ತಲುಪಿದ ಬಗೆ ಹೇಗೆ?

ನಾನು ಹುಟ್ಟಿದ್ದು ಕುಗ್ರಾಮದಲ್ಲಿ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಲದಕಲ್‌ನಲ್ಲಿ. ಊರು ಈಗ ತುಸು ಸುಧಾರಿಸಿದೆ. ನಾನು ನಮ್ಮೂರಿನ ಮೊದಲ ಪದವೀಧರ. ಯಾವುದೇ ಅನುಕೂಲ ಇಲ್ಲದ ಹಳ್ಳಿಯಲ್ಲಿ ಹುಟ್ಟಿದವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆಗಬಹುದಾದರೆ, ಉಳಿದವರೂ ಆಗಬಹುದು. ಛಲ, ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯದ ಜೊತೆ ದೇವರ ಕೃಪೆ ಇದ್ದರೆ ಯಾರೂ ಸಾಧನೆ ಮಾಡಬಹುದು. ನಾನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಆಗುವವರೆಗೆ ಉತ್ತರ ಕರ್ನಾಟಕದ ಯಾರೂ ಆ ಹಂತ ತಲುಪಿರಲಿಲ್ಲ – ಮೈಸೂರು, ಕರಾವಳಿ ಭಾಗದವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕ ಆದ ನಿದರ್ಶನಗಳು ಇದ್ದವು. ಉತ್ತರ ಕರ್ನಾಟಕ ಭಾಗದಿಂದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೊದಲ ನ್ಯಾಯಮೂರ್ತಿ ನಾನು ಎಂಬ ಮಾತನ್ನು ಗರ್ವದಿಂದ ಹೇಳುತ್ತೇನೆ.

* ವೈಯಕ್ತಿಕ ಜೀವನದಲ್ಲಿ, ವೃತ್ತಿ ಜೀವನದಲ್ಲಿ ವಿಷಾದವೇನಾದರೂ ಇದೆಯೇ?

ಯಾವುದರಲ್ಲೂ ವಿಷಾದ ಇಲ್ಲ. ಸಂತೃಪ್ತಿ, ಸಂತಸ ಇದೆ. ವಿಷಾದಿಸಬೇಕಾದ ಏನೂ ನನ್ನ ಜೀವನದಲ್ಲಿ ನಡೆದಿಲ್ಲ.

(ನ್ಯಾಯಮೂರ್ತಿ ಪಾಟೀಲ ಅವರ ಜನ್ಮದಿನದ ಆಚರಣೆ ‘ಸಾರ್ಥಕ ಜೀವನ’ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.