ಬೆಂಗಳೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರ ಖಾಲಿ ಹುದ್ದೆ ಭರ್ತಿಗೆ 2020ರಲ್ಲಿ ಪ್ರಕಟಿಸಿದ್ದ ಹೆಚ್ಚುವರಿ ಪಟ್ಟಿಯಲ್ಲಿನ ಜ್ಯೇಷ್ಠತೆ ಕಡೆಗಣಿಸಿ 48 ಅಭ್ಯರ್ಥಿಗಳಿಗೆ ಎರಡು ವರ್ಷಗಳ ನಂತರ ನೇಮಕಾತಿ ಆದೇಶ ನೀಡಿರುವುದು ವಿವಾದ ಸೃಷ್ಟಿಸಿದೆ.
ರಾಜ್ಯದ ವಿವಿಧ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ 1,203 ಹುದ್ದೆಗಳಿಗೆ 2015ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. 2018 ಡಿಸೆಂಬರ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿತ್ತು. ವಿವಿಧ ವಿಷಯ, ಮೀಸಲಾತಿ ಆಧಾರದಲ್ಲಿ ಸಿದ್ಧವಾಗಿದ್ದ ಆಯ್ಕೆಪಟ್ಟಿ ಅನುಸಾರ ಅಭ್ಯರ್ಥಿಗಳಿಗೆ 2020ರಲ್ಲಿ ನೇಮಕಾತಿ ಆದೇಶ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ನೇಮಕಾತಿ ಆದೇಶ ಪಡೆದಿದ್ದ ಅಭ್ಯರ್ಥಿಗಳು ಈಗಾಗಲೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2020ರಲ್ಲಿ ನೇಮಕಾತಿ ಆದೇಶ ನೀಡಿದ ನಂತರ 48 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ ಉಪನ್ಯಾಸಕರ ಹುದ್ದೆಗೆ ವರದಿ ಮಾಡಿಕೊಂಡಿರಲಿಲ್ಲ. ಖಾಲಿ ಉಳಿದಿದ್ದ ಆ ಹುದ್ದೆಗಳಿಗೆ ಹೆಚ್ಚುವರಿ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರಲಿಲ್ಲ. 7 ವರ್ಷಗಳ ಅವಧಿಯಲ್ಲಿ ಮತ್ತೆ 778 ಹುದ್ದೆಗಳು ಖಾಲಿಯಾಗಿದ್ದು, ಭರ್ತಿ ಮಾಡಿಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಅನುಮತಿ ಕೇಳಿದ್ದರು. ನೇರ ನೇಮಕಾತಿ ಮಾಡಿಕೊಳ್ಳಲು ಆ. 18ರಂದು ಸರ್ಕಾರ ಅನುಮತಿ ನೀಡಿದೆ. ಹೊಸ ನೇಮಕಾತಿಗೆ ಅನುಮತಿ ನೀಡಿದ ನಾಲ್ಕು ದಿನಗಳಲ್ಲೇ ಮೆರಿಟ್ ಉಲ್ಲಂಘಿಸಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳು ಆಪಾದಿಸಿದ್ದಾರೆ.
ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತ, ಸಮಾಜಶಾಸ್ತ್ರ ವಿಷಯ
ದಲ್ಲಿ ಬಾಕಿ ಹುದ್ದೆಗಳಿಗೆ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
‘ಇಲಾಖೆ ಪ್ರಕಟಿಸಿರುವ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳು ಪಡೆದ ಶೇಕಡವಾರು ಅಂಕಗಳು, ಜನ್ಮ ದಿನಾಂಕ ನಮೂದಿಸಿಲ್ಲ. ರೋಸ್ಟರ್ ಪದ್ಧತಿ ಅನುಸರಿಸಿಲ್ಲ. ಜ್ಯೇಷ್ಠತೆಗೆ ಆದ್ಯತೆ ನೀಡಿಲ್ಲ. ವ್ಯವಹಾರ ನಿರ್ವಹಣಾ ಶಾಸ್ತ್ರ ಸೇರಿದಂತೆ ಕೆಲವು ವಿಷಯದಲ್ಲಿ ಬಾಕಿ ಉಳಿದಿದ್ದ ಹುದ್ದೆಗೆ ಆಕಾಂಕ್ಷಿಗಳಿದ್ದರೂ, ಅಭ್ಯರ್ಥಿಗಳಿಲ್ಲ ಎಂದು ನಮೂದಿಸಲಾಗಿದೆ. ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಸಂಪರ್ಕಿಸಿದರೆ ತಪ್ಪು ಸರಿಪಡಿಸುವ ಬದಲು, ಕೋರ್ಟ್‌ಗೆ ಹೋಗಲು ಸಲಹೆ ನೀಡಿದರು’ ಎಂದು ಉದ್ಯೋಗ ವಂಚಿತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಿ ಪರಿಷ್ಕರಣೆಗೆ ಸೂಚನೆ
48 ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಾಹಿತಿ ಪಡೆದ ಸಚಿವ ಬಿ.ಸಿ.ನಾಗೇಶ್, ಆಯ್ಕೆ ಪಟ್ಟಿಯನ್ನು ಕೂಲಂಕಶವಾಗಿ ಪರಿಶೀಲಿಸಿ, ನ್ಯೂನತೆಗಳು ಇದ್ದಲ್ಲಿ ಸರಿಪಡಿಸಬೇಕು. ಲೋಪಗಳು ಇಲ್ಲವೆಂದು ದೃಢಪಡಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.
‘ಸಚಿವರ ಸೂಚನೆಯಂತೆ ಪಟ್ಟಿಯನ್ನು ಹಿಂಪಡೆಯಲಾಗಿದೆ. ಆಕ್ಷೇಪಗಳನ್ನು ಆಹ್ವಾನಿಸಿದ ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದು ನಿರ್ದೇಶಕ ರಾಮಚಂದ್ರನ್ ಪ್ರಕಟಣೆಹಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.