- ಅರ್ಜುನ್ ರಘುನಾಥ್
ತಿರುವನಂತಪುರ: ವಂಚನೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆದ ಆರೋಪದಲ್ಲಿ ಇನ್‌ಸ್ಪೆಕ್ಟರ್ ಸೇರಿ 4 ಮಂದಿ ಕರ್ನಾಟಕದ ಪೊಲೀಸ್ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ನಡೆದ ವಂಚನೆ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಲು ಕರ್ನಾಟಕ ಪೊಲೀಸರು ಆಗಸ್ಟ್ 1ರಂದು ಕೊಚ್ಚಿಗೆ ತೆರಳಿದ್ದರು. ಅಲ್ಲಿ ಅವರು ಇಬ್ಬರು ಆರೋಪಿಗಳಿಂದ ₹ 3.95 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಕೊಚ್ಚಿಯ ಕಮಲಶ್ಶೇರಿ ಪೊಲೀಸರು ಕರ್ನಾಟಕದ 4 ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿರುವ ಕೊಚ್ಚಿ ಪೊಲೀಸ್ ಉಪ ಆಯುಕ್ತ ಬೇಬಿ ಪಿವಿ, ‘ಪ್ರಕರಣ ಸಂಬಂಧ ನಾವು ಕರ್ನಾಟಕ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಗುರುತು ಹಾಗೂ ಕೊಚ್ಚಿಗೆ ಬಂದಿರುವ ಉದ್ದೇಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ದಾಖಲಾಗಿದೆ‘ ಎಂದು ಹೇಳಿದ್ದಾರೆ.
ಪರಿಶೀಲನೆ ಬಳಿಕ ವಶಕ್ಕೆ ಪಡೆದವರ ಮಾಹಿತಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಈ ಪೊಲೀಸರು ತೆರಳಿದ್ದರು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.