ಬೆಂಗಳೂರು: ದೊಡ್ಡಬಳ್ಳಾಪುರದ ಬಳಿ ₹25 ಸಾವಿರ ಕೋಟಿ ಹೂಡಿಕೆ ಮೂಲಕ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಎಲ್ಲ ನೆರವನ್ನೂ ನೀಡಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಇನ್ನೂ ಹೆಚ್ಚು ಹೂಡಿಕೆ ಮಾಡುವಂತೆ ಕಂಪನಿಗೆ ಮನವಿ ಮಾಡಿದರು.
ಬೆಂಗಳೂರಿಗೆ ಬಂದಿದ್ದ ಫಾಕ್ಸ್‌ಕಾನ್ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗಕ್ಕೆ ಶುಕ್ರವಾರ ರಾತ್ರಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಅವರು ಮಾತನಾಡಿದರು.
ಫಾಕ್ಸ್‌ಕಾನ್ ಕಂಪನಿಗೆ ನೀರು, ವಿದ್ಯುತ್, ರಸ್ತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಿದ್ದೇವೆ. ಕಂಪನಿಯು ಫ್ಯಾಬ್ ಉದ್ಯಮ ವಲಯ ಸೇರಿದಂತೆ ಮಿಕ್ಕ ವಲಯಗಳಲ್ಲೂ ಹೆಚ್ಚು ಹೂಡಿಕೆ ಮಾಡಲು ಒಲವು ತೋರಿಸಬೇಕು. ರಾಜ್ಯವು ಅತ್ಯುತ್ತಮ ಮೌಲ್ಯಗಳಿಂದ ಕೂಡಿರುವ ಕೈಗಾರಿಕಾ ಸಂಸ್ಕೃತಿಯನ್ನು ಹೊಂದಿದೆ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಒತ್ತು ಕೊಟ್ಟಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯಂಗ್ ಲಿಯು, ರಾಜ್ಯದಲ್ಲಿ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿರುವ ಘಟಕವು ಚೀನಾದ ನಂತರದ ಎರಡನೇ ಅತ್ಯಂತ ಬೃಹತ್ ಘಟಕವಾಗಿದೆ. ಇಲ್ಲಿ 40 ಸಾವಿರ ಮಧ್ಯಮ ಸ್ತರದ ವಿದ್ಯಾವಂತರಿಗೆ ಉದ್ಯೋಗಾವಕಾಶ ಸಿಗಲಿದೆ. ನಮ್ಮ ಹೂಡಿಕೆ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಪರಸ್ಪರ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಉದ್ಯೋಗಿಗಳಿಗೆ ಮನೆಗಿಂತಲೂ ಹೆಚ್ಚಿನ ನೆಮ್ಮದಿಯ ವಾತಾವರಣ ಇರಲಿದೆ. ಇವರಿಗೆ ಗುಣಮಟ್ಟದ ಮನೋರಂಜನೆ, ಜಿಮ್, ವಸತಿ ಸೌಲಭ್ಯ, ಆಹಾರ ಎಲ್ಲವನ್ನೂ ಫಾಕ್ಸ್‌ಕಾನ್ ಕಂಪನಿ ಒದಗಿಸಲಿದೆ. ಈ ಮೂಲಕ ಜಾಗತಿಕ ಗುಣಮಟ್ಟದ ಕೈಗಾರಿಕಾ ಪರಿಸರವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ರಾಜ್ಯವು ಹೆಚ್ಚಿನ ಹೂಡಿಕೆಯನ್ನು ಮುಕ್ತವಾಗಿ ಸ್ವಾಗತಿಸಲಿದೆ. ಕೆಐಎಡಿಬಿ, ಕೆಪಿಟಿಸಿಎಲ್, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಫಾಕ್ಸ್‌ಕಾನ್ ಕಂಪನಿಯ ಯೋಜನೆಯು ಸುಗಮವಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ಬದ್ಧತೆಯಿಂದ ಶ್ರಮಿಸುತ್ತಿವೆ. ಕಂಪನಿಗೆ ಈಗಾಗಲೇ 300 ಎಕರೆ ಭೂಮಿಯನ್ನು ಕೊಡಲಾಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯವು ದೇಶದಲ್ಲೇ ಅತ್ಯುತ್ತಮ ಉದ್ಯಮ ಸ್ನೇಹಿ ನೀತಿಯನ್ನು ಹೊಂದಿದ್ದು, ಫಾಕ್ಸ್‌ಕಾನ್ ಕಂಪನಿಯು ಇಲ್ಲಿಗೆ ಬರುತ್ತಿರುವುದು ಸ್ವಾಗತಾರ್ಹ ಎಂದರು.
ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.