ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ವಂಚಿಸಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿ ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯವು 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಚೈತ್ರಾ, ರಮೇಶ್, ಧನರಾಜ್, ಪ್ರಜ್ವಲ್ ಹಾಗೂ ಶ್ರೀಕಾಂತ್ ಅವರನ್ನು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 2ನೇ ಆರೋಪಿ ಗಗನ್‌ನನ್ನು ಮಂಗಳವಾರವೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಗಗನ್ ಸೇರಿದಂತೆ ಆರು ಮಂದಿಯ ವಿಚಾರಣೆಯು 10 ದಿನಗಳ ಕಾಲ ಸಿಸಿಬಿ ಕಚೇರಿಯಲ್ಲಿ ನಡೆಯಲಿದೆ.
ನಕಲಿ ನಾಯಕ ಸೃಷ್ಟಿಯಾಗಿದ್ದು ಕಡೂರಿನಲ್ಲಿ!
ಕಡೂರು (ಚಿಕ್ಕಮಗಳೂರು): ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಆರ್‌ಎಸ್‌ಎಸ್ ನಕಲಿ ನಾಯಕ ಸೃಷ್ಟಿಯಾಗಿದ್ದು ಪಟ್ಟಣದಲ್ಲಿ ಎನ್ನುವುದು ಗೊತ್ತಾಗಿದೆ.
ಆರೋಪಿಗಳಲ್ಲಿ ಒಬ್ಬರಾಗಿರುವ ರಮೇಶ್ ಅವರನ್ನು ‘ಮಿಸ್ಟರ್ ಕಟ್’ ಸಲೂನ್‌ಗೆ ಕರೆತಂದಿದ್ದ ಮತ್ತೊಬ್ಬ ಆರೋಪಿ ಧನರಾಜ್, ಆರ್‌ಎಸ್‌ಎಸ್ ಪ್ರಚಾರಕರ ಶೈಲಿಯಲ್ಲಿ ತಲೆಗೂದಲು ಕಟ್ ಮಾಡಿಸಿದ್ದರು.
ದೊಡ್ಡಪೇಟೆಯ ಬನಶಂಕರಿ ದೇವಸ್ಥಾನದ ಬಳಿಯಿರುವ ಈ ಸೆಲೂನ್ ಮಾಲೀಕ ರಾಮ್ ಅವರಿಗೆ ಭಾವಚಿತ್ರವೊಂದನ್ನು ತೋರಿಸಿ ಅದೇ ಮಾದರಿಯಲ್ಲಿ ತಲೆಗೂದಲು ಕಟ್ ಮಾಡಬೇಕೆಂದು ತಿಳಿಸಿದ್ದರು. ಅದರಂತೆ ರಾಮ್ ಅವರು ಕೇಶ ವಿನ್ಯಾಸ ಮಾಡಿದ್ದರು.
‘ಧನರಾಜ್ ಒಂದು ದಿನ ರಾತ್ರಿ 8.30ರ ಸುಮಾರಿನಲ್ಲಿ ಒಬ್ಬರನ್ನು ಕರೆತಂದು ಭಾವಚಿತ್ರವೊಂದನ್ನು ತೋರಿಸಿ ಅದೇ ರೀತಿ ಕೇಶವಿನ್ಯಾಸ ಮಾಡಲು ತಿಳಿಸಿದ್ದರು. ಅದರಂತೆಯೇ ಮಾಡಿ ಕಳಿಸಿದ್ದೆ’ ಎಂದು ರಾಮ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.