ಬೆಂಗಳೂರು: ತೆರಿಗೆ ವಂಚಿಸಲು ಹಲವು ಕಳ್ಳದಾರಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ವಾಹನ ಮಾಲೀಕರಿಗೆ ಹುಡುಕಿಕೊಟ್ಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ.ವಾಹನಗಳ ತಳ ಅಳತೆಯನ್ನು ಕಡಿಮೆ ನಮೂದಿಸಿ ಸರ್ಕಾರಕ್ಕೆ ವಂಚಿಸಿರುವ ಹಲವು ಪ್ರಕರಣಗಳು ದೃಢಪಟ್ಟಿವೆ.
ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳು, ಮಾಕ್ಸಿಕ್ಯಾಬ್‌ಗಳು ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕು. ವಾಹನಗಳ ಉದ್ದ ಮತ್ತು ಅಗಲ ಆಧರಿಸಿ ತೆರಿಗೆ ನಿಗದಿ ಮಾಡಲಾಗಿದೆ. ವಾಹನದ ಅಳತೆಯನ್ನೇ (ಫ್ಲೋರ್ ಏರಿಯಾ) ಕಡಿಮೆ ದಾಖಲಿಸಿ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಕಲೆಯನ್ನು ಅಧಿಕಾರಿಗಳು ಸಿದ್ಧಿಸಿಕೊಂಡಿದ್ದಾರೆ. ಸಾರಿಗೆ ಇಲಾಖೆಯ ಎಲ್ಲಾ ಸೇವೆಯನ್ನೂ ಆನ್‌ಲೈನ್ ಮಾಡಿದ್ದರೂ ಅಕ್ರಮ ದಾರಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ಕಂಡುಕೊಂಡಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂಬುದನ್ನು ವರದಿಯೇ ಹೇಳಿದೆ.
ತೆರಿಗೆ ವಂಚನೆ ಹೇಗೆ?: ವಾಹನದ ಒಳಭಾಗದ ಅಳತೆ 21 ಅಡಿ ಇದ್ದರೆ ಆ ವಾಹನಕ್ಕೆ ತ್ರೈಮಾಸಿಕ ₹52,448 ತೆರಿಗೆ ಪಾವತಿಸಬೇಕು. ಸರ್ವರ್‌ನಲ್ಲಿ ವಾಹನದ ಅಳತೆಯನ್ನು ಕಡಿಮೆ ನಮೂದಿಸಿದರೆ ತೆರಿಗೆ ಮೊತ್ತವೂ ಕಡಿಮೆಯಾಗುತ್ತದೆ. 17.1 ಅಡಿ ಎಂದು ನಮೂದಿಸಿ ₹42,708 ಪಾವತಿ ಮಾಡಿಸಿಕೊಳ್ಳಲಾಗಿದೆ. ಇದರಿಂದ ಪ್ರತಿ ವಾಹನದಿಂದ ₹9,740 ನಷ್ಟು ಸರ್ಕಾರಕ್ಕೆ ಖೋತಾ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈ ರೀತಿಯ 12 ಪ್ರಕರಣ ಪತ್ತೆಯಾಗಿವೆ. ಈ ಬಗ್ಗೆ ವ್ಯಕ್ತಿ ಯೊಬ್ಬರು ನೀಡಿದ್ದ ದೂರು ಆಧರಿಸಿ ಸಾರಿಗೆ ಆಯುಕ್ತರು 2022ರ ಜನವರಿಯಲ್ಲಿ ತನಿಖೆಗೆ ಆದೇಶಿಸಿದ್ದರು. ತನಿಖೆ ಪೂರ್ಣಗೊಂಡಿದ್ದು, ವಾಹನ ಮಾಲೀಕರೊಂದಿಗೆ ಸಾರಿಗೆ ಇಲಾಖೆ ಸಿಬ್ಬಂದಿ ಕೈಜೋಡಿಸಿ ತೆರಿಗೆ ವಂಚಿಸಿರುವುದು ಬಹಿರಂಗವಾಗಿದೆ. ‘ಮಾಕ್ಸಿಕ್ಯಾಬ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆ ಇದೆ’ ಎನ್ನಲಾಗಿದೆ.
‘ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಲ್ಲ ಏಕೆ’
‘ಪ್ರಾಥಮಿಕ ತನಿಖಾ ವರದಿಯನ್ನು ಸಾರಿಗೆ ಆಯುಕ್ತರು ಏಪ್ರಿಲ್‌ನಲ್ಲೇ ಪಡೆದು ಕೊಂಡಿದ್ದು, ಈವರೆಗೆ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ. ಹೆಚ್ಚಿನ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಸಿಬ್ಬಂದಿಯನ್ನು ವಜಾ ಮಾಡಬೇಕು’ ಎಂದು ಆಮ್ ಆದ್ಮಿ(ಎಎಪಿ) ಪಕ್ಷದರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆಗ್ರಹಿಸಿದರು.
‘ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದಿರುವುದು ಅಕ್ರಮ ಕೇವಲ ಉದಾಹರಣೆಯಷ್ಟೆ. ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲೂ ಈ ರೀತಿಯ ಅಕ್ರಮಗಳು ನಡೆದಿರುತ್ತವೆ. ಬೊಕ್ಕಸಕ್ಕೆ ವರಮಾನ ಸೋರಿಕೆ ಆಗುವುದನ್ನು ತಪ್ಪಿಸಲು ಮತ್ತು ಭ್ರಷ್ಟರಿಗೆ ಶಿಕ್ಷೆ ಕೊಡಿಸಲು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.