ಬೆಂಗಳೂರು: ‘ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದಿನಿಂದಲೇ(ನ.1) ಈ ಸೌಲಭ್ಯವನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
‘ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಹಾಗೂ ಕನ್ನಡ ಶಾಲೆಗಳ ಮೂಲಸೌಕರ್ಯಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ’ ಎಂದರು.
‘ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಕನ್ನಡಿಗರು ಕೇಂದ್ರದ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಈ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.
‘ಎಲ್ಲ ಭಾಷೆಗಳನ್ನು ನಾವು ಗೌರವಿಸಬೇಕು. ಆದರೆ ನಮ್ಮ ನಾಡಿನಲ್ಲಿ ಆಡಳಿತ ಹಾಗೂ ವ್ಯವಹಾರದ ಭಾಷೆಯಾಗಿ ಕನ್ನಡವನ್ನೇ ಬಳಸಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದರು.
‘ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ’ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದಡಿ ವರ್ಷವಿಡೀ ಸ್ವಾಭಿಮಾನಿ ಕನ್ನಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವೇ 50ನೇ ವರ್ಷಾಚರಣೆ ಮಾಡಬೇಕಿತ್ತು. ಅವರು ಆಚರಿಸಲಿಲ್ಲ, ಹೀಗಾಗಿ ನಾವು ಆಚರಿಸುತ್ತಿದ್ದೇವೆ’ ಎಂದು ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬೆಂಡೋಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆಯ ಬಿ.ಕೆ.ವಿ. ಸರ್ಕಾರಿ ಪ್ರೌಢಶಾಲೆಗೆ, ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೇಗೌಡರ ಸ್ಮರಣಾರ್ಥ ನೀಡುವ 2023–24ನೇ ಸಾಲಿನ ‘ಅತ್ಯುತ್ತಮ ಶಾಲಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಆರ್.ವಿ. ದೇಶಪಾಂಡೆ, ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ವೇಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.