ADVERTISEMENT

ಕೋವಿಡ್‌ ಪೀಡಿತರಿಗೆ ‘ಆಶಾಯೇ’ ಬಳಗದ ಮನೆ ಊಟ

ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆ ಮೆರೆಯುತ್ತಿರುವ ‘ಆಶಾಯೇ’ ಬಳಗ

ಜಿ.ಶಿವಕುಮಾರ
Published 7 ಮೇ 2021, 20:30 IST
Last Updated 7 ಮೇ 2021, 20:30 IST
ಆಶಾಯೆ ತಂಡದ ಸದಸ್ಯರು
ಆಶಾಯೆ ತಂಡದ ಸದಸ್ಯರು   

ಬೆಂಗಳೂರು: ‘ಆಶಾಯೇ’.. ಯುವಪಡೆಯೊಂದು ಕೇವಲ ಐದು ದಿನಗಳ ಹಿಂದೆ ಕಟ್ಟಿದ ಈ ಬಳಗ ಈಗ ನಿತ್ಯ ನೂರಾರು ಮಂದಿಯ ಹಸಿವು ನೀಗಿಸುತ್ತಿದೆ. ಕೋವಿಡ್‌ ಪೀಡಿತರಿಗೆ ಮನೆ ಅಡುಗೆಯ ಸವಿ ಉಣಬಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

ಉಮಂಗ್‌, ಮೈತ್ರಿ, ಸಲೋನಿ, ಹಾರ್ದಿಕ್‌, ಮಾಲಾ ವೊರಾ, ಮನೀಷಾ ಮತ್ತು ಮೇಹಾ ಅವರು ಈ ಬಳಗದ ರೂವಾರಿಗಳು. ಮೂಲತಃ ಗುಜರಾತ್‌ನವರಾದ ಇವರು ಬೆಂಗಳೂರಿನ ಶೇಷಾದ್ರಿಪುರದಲ್ಲಿ ನೆಲೆಸಿದ್ದಾರೆ. ಈ ತಂಡ ರೋಗಿಗಳಿಗೆಪ್ರತಿನಿತ್ಯ 1,000 ಥೇತ್ಲ (ಮಸಾಲೆ ಪರೋಟ) ಒದಗಿಸುತ್ತಿದೆ.

‘ಬಾಂದ್ರಾದಲ್ಲಿ ಆಹಾರವಿಲ್ಲದೇ ಮೂರು ದಿನದಲ್ಲಿ 20 ಮಂದಿ ಮೃತಪಟ್ಟಿರುವ ಸುದ್ದಿಯೊಂದನ್ನು ಕೆಲ ದಿನಗಳ ಹಿಂದೆ ಗೂಗಲ್‌ನಲ್ಲಿ ಓದಿದೆ. ಅದು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಆಗಲೇ ಕೋವಿಡ್‌ ಪೀಡಿತರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಉಚಿತವಾಗಿ ನೀಡಬೇಕೆಂಬ ಆಲೋಚನೆ ಹೊಳೆದಿದ್ದು. ಇದನ್ನು ನನ್ನ ಸ್ನೇಹಿತರ ಜೊತೆ ಹಂಚಿಕೊಂಡೆ. ಅವರೂ ಕೈಜೋಡಿಸಿದರು. ಶುರುವಿನಲ್ಲಿ ನಾವೇ ಹಣ ಹಾಕಿ ರೋಗಿಗಳಿಗೆ ‘ಥೇತ್ಲ’ ಒದಗಿಸಿದೆವು. ನಮ್ಮ ಕೆಲಸ ನೋಡಿ ಇನ್ನೂ ಕೆಲವರು ಜೊತೆಯಾದರು. ನಮ್ಮ ತಂಡದಲ್ಲಿ ಈಗ ಒಟ್ಟು 102 ಮಹಿಳೆಯರಿದ್ದಾರೆ. ಇವರು ನಗರದ ವಿವಿಧ ಭಾಗಗಳಲ್ಲಿ ನೆಲೆಸಿದ್ದು ಮನೆಯಲ್ಲೇ ‘ಥೇತ್ಲ’ ತಯಾರಿಸಿ ನಮಗೆ ಕಳುಹಿಸುತ್ತಾರೆ’ ಎಂದು ಉಮಂಗ್‌ ವೊರಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೆಂಗಳೂರು ರೈಡರ್ಸ್‌, ಮಿಷನ್‌ ಚಾಯ್‌, ಬೆಂಗಳೂರು ವಿಮೆನ್‌ ಸೇರಿದಂತೆ ಒಟ್ಟು ಎಂಟು ಸಂಘಟನೆಗಳಿಗೆ ನಾವು ಪ್ಯಾಕೆಟ್‌ ರೂಪದಲ್ಲಿ ‘ಥೇತ್ಲ’ ಒದಗಿಸುತ್ತೇವೆ. ಅವರು ಅದನ್ನು ರೋಗಿಗಳ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಒಂದು ಪೊಟ್ಟಣದಲ್ಲಿ ಐದು ‘ಥೇತ್ಲ’ ಇರುತ್ತದೆ. ಇದನ್ನು ಮೊಸರು ಅಥವಾ ಉಪ್ಪಿನ ಕಾಯಿ ಜೊತೆ ಸೇವಿಸಬಹುದು. ಮೆಂತ್ಯ, ಬೇಳೆ, ಮೊಸರು, ಅರಿಶಿಣ ಹಾಗೂ ಇತರ ಪದಾರ್ಥಗಳನ್ನು ಹಾಕಿ ಇದನ್ನು ಸಿದ್ಧಪಡಿಸುತ್ತೇವೆ. ಇದು ಮೂರು ದಿನವಾದರೂ ಕೆಡುವುದಿಲ್ಲ. ಇದು ಪೌಷ್ಠಿಕಾಂಶಯುಕ್ತ ಆಹಾರ. ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಹೀಗಾಗಿ ಇದಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ’ ಎಂದರು.

ಸಂಪರ್ಕಕ್ಕಾಗಿ: ಉಮಂಗ್‌–9480674919, ಹಾರ್ದಿಕ್‌–7411968363.

ಕನ್ನಡತಿಯರಿಗೆ ‘ಥೇತ್ಲ’ ತಯಾರಿಕೆಯ ತರಬೇತಿ

‘ನಮ್ಮ ಬಳಗದಲ್ಲಿ ಕರ್ನಾಟಕದವರೂ ಇದ್ದಾರೆ. ಅವರಿಗೆ ‘ಥೇತ್ಲ’ ತಯಾರಿಸುವುದು ಗೊತ್ತಿಲ್ಲ. ಹೀಗಿದ್ದರೂ ನಮ್ಮ ಕೆಲಸಕ್ಕೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಹೀಗಾಗಿ ಒಂದಷ್ಟು ವಿಡಿಯೊಗಳನ್ನು ಕಳುಹಿಸಿದ್ದೆವು. ಅದನ್ನು ನೋಡಿ ನಿತ್ಯವೂ ‘ಥೇತ್ಲ’ ತಯಾರಿಸಿ ಕೊಡುತ್ತಿದ್ದಾರೆ. ಅವರ ಆಸಕ್ತಿ ನೋಡಿ ನಮ್ಮ ಉತ್ಸಾಹ ಇಮ್ಮಡಿಸಿದೆ’ ಎಂದು ಉಮಂಗ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.